ಲಾರಿಯ ಟೈರ್ ಸ್ಪೋಟಗೊಂಡು ಪಾದಚಾರಿಗೆ ಡಿಕ್ಕಿ : ಸಾವು
ಭದ್ರಾವತಿ: ನಗರದ ತರೀಕೆರೆ ರಸ್ತೆ ಶಿವಾನಿ ಕ್ರಾಸ್ ಸಮೀಪ ಲಾರಿಯೊಂದರ ಟೈರ್ ಸ್ಪೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ತೀವ್ರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಇಸ್ಮಾಯಿಲ್ ಜಬಿವುಲ್ಲಾ (೨೫) ಎಂದು ಗುರುತಿಸಲಾಗಿದೆ. ತಾಲೂಕಿನ ತಿಪ್ಲಾಪುರ ಗ್ರಾಮದ ನಿವಾಸಿಯಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಜೂನ್ ೨೭ರಂದು ಮಧ್ಯಾಹ್ನ ಸುಮಾರು ೧.೩೦ರ ವೇಳೆಗೆ ಕೆಲಸದ ನಿಮಿತ್ತ ಶಿವಾನಿ ಕ್ರಾಸ್ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಭಾರತ್ ಬೆಂಜ್ ಲಾರಿಯ ಹಿಂಭಾಗದ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಇಸ್ಮಾಯಿಲ್ ತಲೆಯ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
