ನರೇಂದ್ರ ಮೋದಿಗೆ ದೇಶದ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಹೆಗ್ಗಳಿಕೆ 

ಬಿಜೆಪಿ ನಗರ, ಗ್ರಾಮಾಂತರ ಮಂಡಲದಿಂದ ವಿಶೇಷ ಪೂಜೆ, ಪುಷ್ಪಾರ್ಚನೆ 


ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಹುದ್ದೆಯಲ್ಲಿ ೪,೩೯೯ ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಅತಿ ಹೆಚ್ಚಿನ ಅವಧಿ ಪೂರೈಸಿರುವ ಪ್ರಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹಿನ್ನಲೆಯಲ್ಲಿ ಭದ್ರಾವತಿಯಲ್ಲಿ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಹಳೇನಗರದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಲಾಯಿತು.
    ಭದ್ರಾವತಿ : ನರೇಂದ್ರ ಮೋದಿಯವರು ಪ್ರಧಾನ ಮಂತ್ರಿ ಹುದ್ದೆಯಲ್ಲಿ ೪,೩೯೯ ದಿನಗಳನ್ನು ಯಶಸ್ವಿಯಾಗಿ ಪೂರೈಸಿ ಅತಿ ಹೆಚ್ಚಿನ ಅವಧಿ ಪೂರೈಸಿರುವ ಪ್ರಪ್ರಥಮ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹಿನ್ನಲೆಯಲ್ಲಿ ನಗರ ಹಾಗೂ ಗ್ರಾಮಾಂತರ ಮಂಡಲ ವತಿಯಿಂದ ಹಳೇನಗರದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಲಾಯಿತು.
    ಪಕ್ಷದ ಪ್ರಮುಖರು ಮಾತನಾಡಿ, ನರೇಂದ್ರಮೋದಿಯವರು ದೇಶದ ಇತಿಹಾಸದಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದ ಧೀಮಂತ ನಾಯಕ. ಭ್ರಷ್ಟಾಚಾರ ರಹಿತ ಆಡಳಿತದ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಿ ಮಾದರಿಯಾಗಿದ್ದಾರೆ. ದೇಶದ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಶತ್ರು ರಾಷ್ಟ್ರಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ದೇಶದ ರಕ್ಷಣೆಗೆ ಸನ್ನದ್ಧರಾಗಿರುವ ಸೈನಿಕರಿಗೆ ಬೆನ್ನೆಲುಬಾಗಿ ನಿಂತಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು. 
     ಮಹಾಮಾರಿ ಕೊರೋನಾ ಸಂದರ್ಭದಲ್ಲಿ ನರೇಂದ್ರ ಮೋದಿಯವರು ದೇಶ-ವಿದೇಶಗಳಿಗೆ ವ್ಯಾಕ್ಸಿನ್ ನೀಡಿ ಕೋಟ್ಯಂತರ ಜೀವಗಳನ್ನು ರಕ್ಷಿಸಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತಿಯಾಗಿ ಆಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ದೇಶ-ವಿದೇಶಗಳ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪುರಸ್ಕೃತರಾಗಿರುವ ಮಹಾನ್ ನಾಯಕ ಎಂದು ಬಣ್ಣಿಸಿದರು.      
    ಪಕ್ಷದ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚನ್ನೇಶ್, ರಘುರಾವ್, ಮೊಸರಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸರಸ್ವತಿ, ಮುಖಂಡರಾದ ಮಂಗೋಟೆ ರುದ್ರೇಶ್, ಮಂಜುನಾಥ್, ಮಂಡಲ ಪದಾಧಿಕಾರಿಗಳು, ಮೋರ್ಚಾಗಳ, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಹಿಳಾ ಕಾರ್ಯಕರ್ತರು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.