ಒಲಿಂಪಿಯಡ್ ಪರೀಕ್ಷೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಸಹಕಾರಿ
ಭದ್ರಾವತಿ ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ -1ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಒಲಿಂಪಿಯಡ್ ಪರೀಕ್ಷೆಯಲ್ಲಿ ಶೇ.90ರಷ್ಟು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಲಾಯಿತು.
ಭದ್ರಾವತಿ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಒಲಿಂಪಿಯಡ್ ಪರೀಕ್ಷೆ ಸಹಕಾರಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮುರಳಿಧರ ಶೆಟ್ಟಿ ತಿಳಿಸಿದರು.
ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿ -1ರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಒಲಿಂಪಿಯಡ್ ಪರೀಕ್ಷೆಯಲ್ಲಿ ಶೇ.90ರಷ್ಟು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.
ಒಲಿಂಪಿಯಡ್ ಪರೀಕ್ಷೆ 1 ರಿಂದ 12 ನೇ ತರಗತಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಸಲಾಗುವ ವಿಶೇಷ ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು, ಈ ಪರೀಕ್ಷೆ ಗಣಿತ , ವಿಜ್ಞಾನ, ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನದಂತಹ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಅಲ್ಲದೆ ವಿದ್ಯಾರ್ಥಿಗಳ ಆಳವಾದ ಜ್ಞಾನ, ಸಮಸ್ಯೆಗಳನ್ನು ಪರಿಹರಿಸುವ, ಕೌಶಲ್ಯವನ್ನು ಹೆಚ್ಚಿಸಲು ವಿನ್ಯಾಸಗೊಳಿಸುವ ಪರೀಕ್ಷೆಯಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಸಾಧ್ಯವಾಗುತ್ತದೆ ಎಂದರು.
ತಾಲೂಕು ವ್ಯಾಪ್ತಿಯ ಸಿ.ಎಸ್.ಸಿ ಸೇವಾ ಕೇಂದ್ರದಲ್ಲಿ 1 ರಿಂದ 12ನೇ ತರಗತಿಯ ಸುಮಾರು 550 ವಿದ್ಯಾರ್ಥಿಗಳು ಆನ್ ಲೈನ್ ಒಲಂಪಿಯಾಡ್ ಪರೀಕ್ಷೆ ಬರೆದಿದ್ದು, ಈ ಪೈಕಿ ಶೇ. 90ರಷ್ಟು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಯೋಜನಾ ಕಚೇರಿ-1ರಲ್ಲಿ ಪ್ರಮಾಣ ಪತ್ರ ವಿತರಿಸಲಾಯಿತು.
ಬಿಜೆಪಿ ಮುಖಂಡ ಎಂ. ಮಂಜುನಾಥ್, ರಾಜು ರೇವಣಕರ್, ಜಿಲ್ಲಾ ಎಂಐಎಸ್ ಯೋಜನಾಧಿಕಾರಿ ಬಾಲಕೃಷ್ಣ, ತಾಲೂಕು ಯೋಜನಾಧಿಕಾರಿ ಹರೀಶ್ ಕುಮಾರ್ ಶೆಟ್ಟಿ ಮತ್ತು ಹಣಕಾಸು ಪ್ರಬಂಧಕ ರಾಘವೇಂದ್ರ ತಾಲೂಕು ನೋಡೆಲ್ ಅಧಿಕಾರಿ ಕರಿಬಸವಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
