ಸಿ.ಎನ್ ರಸ್ತೆ ಅಗಲೀಕರಣ ತೆರವು ಕಾರ್ಯಾಚರಣೆಗೆ ತೀವ್ರ ವಿರೋಧ 



ಭದ್ರಾವತಿಯಲ್ಲಿ ಚನ್ನಗಿರಿ ರಸ್ತೆಯ ಅಗಲೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು, ರಸ್ತೆ ಅಗಲೀಕರಣದ ಹಿನ್ನಲೆಯಲ್ಲಿ ಬೃಹತ್ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. 
    ಭದ್ರಾವತಿ: ನಗರದ ಚನ್ನಗಿರಿ ರಸ್ತೆ (ಸಿ.ಎನ್ ರಸ್ತೆ) ಅಗಲೀಕರಣ ಕಾರ್ಯ ಭರದಿಂದ ಸಾಗುತ್ತಿದ್ದು, ಈ ನಡುವೆ ವರ್ತಕರಿಂದ ತೆರವು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. 
    ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಚನ್ನಗಿರಿ ರಸ್ತೆ  ಅಗಲೀಕರಣ ಕಾರ್ಯ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಮಾಧವಚಾರ್ ವೃತ್ತದಿಂದ ರಂಗಪ್ಪ ವೃತ್ತದ ವರೆಗೆ ಹಲವಾರು ಬಾರಿ ಗುರುತು ಕಾರ್ಯ ನಡೆಸಿ ಸ್ಥಳೀಯರು ಹಾಗು ವರ್ತಕರ ವಿರೋಧದಿಂದಾಗಿ ಕೈಬಿಡಲಾಗಿತ್ತು. ಕಳೆದ ೫-೬ ತಿಂಗಳಿನಿಂದ ಪುನಃ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು, ವರ್ತಕರು, ಜನಪ್ರತಿನಿಧಿಗಳು ಹಾಗು ಸರ್ಕಾರದ ವಿವಿಧ ಇಲಾಖೆಗಳೊಂದಿಗೆ ಹಲವಾರು ಬಾರಿ ನಗರಸಭೆ ಆಡಳಿತ ಸಭೆ ನಡೆಸಿದ್ದು, ಒಮ್ಮತದ ತೀರ್ಮಾನ ಕೈಗೊಳ್ಳುವಲ್ಲಿ ವಿಫಲವಾಗಿದೆ. ಆದರೂ ಸಹ ಹೇಗಾದರೂ ಮಾಡಿ ರಸ್ತೆ ಅಗಲೀಕರಣ ಕಾರ್ಯ ಕೈಗೊಳ್ಳಬೇಕೆಂಬ ದೃಢ ನಿರ್ಧಾರದೊಂದಿಗೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಿದೆ.
    ಈ ಹಿಂದೆ ಭೂ ಮಾಪಕರ ಅಳತೆ ಪ್ರಕಾರ ರಸ್ತೆ ಅಗಲೀಕರಣದಲ್ಲಿ ಎರಡು ಬದಿ ೪೦ ಅಡಿ ವಿಸ್ತೀರ್ಣಕ್ಕೆ ನಿಗದಿಪಡಿಸಲಾಗಿತ್ತು. ಇದೀಗ ಜಿಪಿಎಸ್ ಮಾದರಿ ಅಳತೆ ಪ್ರಕಾರ ರಸ್ತೆ ಎರಡು ಬದಿ ೬೦ ಅಡಿ ವಿಸ್ತೀರ್ಣಕ್ಕೆ ಅಗಲೀಕರಣ ಕೈಗೊಳ್ಳಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು, ಬುಧವಾರ ಸ್ಥಳೀಯರು, ವರ್ತಕರು ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ರಸ್ತೆ ಅಗಲೀಕರಣ ಅಳತೆ ಕಾರ್ಯಕ್ಕೆ ಅಡ್ಡಿಪಡಿಸಿದರು ಎನ್ನಲಾಗಿದೆ. 


    ಚನ್ನಗಿರಿ ರಸ್ತೆಯಲ್ಲಿನ ಕೆಲವರು ರಸ್ತೆ ಅಗಲೀಕರಣದಲ್ಲಿ ಉಂಟಾಗಿರುವ ಗೊಂದಲದ ಹಿನ್ನಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರಿಂದಾಗಿ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. 
    ಈ ನಡುವೆ ಪೌರಾಯುಕ್ತ ಕೆ.ಎನ್ ಹೇಮಂತ್ ಪ್ರತಿಕ್ರಿಯಿಸಿ, ಮುಂದಿನ ೨-೩ ದಿನಗಳಲ್ಲಿ ಈ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ರಸ್ತೆ ಅಗಲೀಕರಣ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.