ಒಂಟಿಯಾಗಿದ್ದ ಯುವತಿಯ ಮನೆಯ ಆವರಣಕ್ಕೆ ವಿಷಪೂರಿತ ಹಾವು

ಕೊಲ್ಲುವ ಉದ್ದೇಶದಿಂದ ಕೃತ್ಯ, ಪೊಲೀಸರಿಗೆ ದೂರು


- ಇಬ್ಬರು ಅಪರಿಚಿತ ಯುವಕರಿಂದ ಕೃತ್ಯ. 
- ಚೀಲದಲ್ಲಿ ತಂದಿದ್ದ ದೊಡ್ಡ ವಿಷಕಾರಿ ಹಾವು. 
- ಕೃತ್ಯದ ದೃಶ್ಯಾವಳಿಗಳು ಸಿ.ಸಿ ಟಿವಿಯಲ್ಲಿ ಸೆರೆ. 
- ನ್ಯೂಟೌನ್ ಪೊಲೀಸ್ ಠಾಣೆಗೆ ದೂರು. 

    ಭದ್ರಾವತಿ :  ಯುವತಿಯೊಬ್ಬಳು ಮನೆಯಲ್ಲಿದ್ದಾಗ ಹಾಡುಹಗಲೇ ಇಬ್ಬರು ಅಪರಿಚಿತ ಯುವಕರು ವಿಷಪೂರಿತ ಹಾವನ್ನು ಮನೆಯ ಆವರಣದಲ್ಲಿ ಬಿಟ್ಟು ಹೋಗಿರುವ ಘಟನೆ ಕಳೆದ ೫ ದಿನಗಳ ಹಿಂದೆ ನಡೆದಿದ್ದು, ಇದೀಗ ಪ್ರಕರಣ ಬೆಳಕಿಗೆ ಬಂದಿದೆ. 
    ನಗರದ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿರುವ ಜನ್ನಾಪುರದಲ್ಲಿ ಈ ಘಟನೆ ನಡೆದಿದ್ದು, ಜೂ. ೧೨ರಂದು ಬೆಳಗ್ಗೆ ಸುಮಾರು ೧೦.೫೫ರ ಸಮಯದಲ್ಲಿ ಸುಮಾರು ೨೪ ವರ್ಷ ವಯಸ್ಸಿನ ಗುಣಶ್ರೀ ಎಂಬ ಯುವತಿ ಮನೆಯಲ್ಲಿ ಒಂಟಿಯಾಗಿದ್ದಾಗ ಸುಮಾರು ೨೦ ರಿಂದ ೨೫ ವರ್ಷದೊಳಗಿನ ಇಬ್ಬರು ಯುವಕರು ಗೇಟ್ ಒಳಗೆ ಪ್ರವೇಶಿಸಿ, ತಮ್ಮೊಂದಿಗೆ ತಂದಿದ್ದ ಚೀಲದಿಂದ ದೊಡ್ಡ ವಿಷಕಾರಿ ಹಾವೊಂದನ್ನು ಮನೆಯ ಆವರಣದೊಳಗೆ ಬಿಟ್ಟು ಓಡಿಹೋಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. 
    ಮನೆಯ ಸಿ.ಸಿ ಟಿವಿಯಲ್ಲಿ ಘಟನೆಯ ದೃಶ್ಯಾವಳಿ ಸೆರೆಯಾಗಿದ್ದು, ಕೆಲಸಕ್ಕೆ ತೆರಳಿದ್ದ ಗುಣಶ್ರೀ ಅವರ ತಾಯಿ ಮನೆಗೆ ಹಿಂದಿರುಗಿ ಬಂದ ನಂತರ ಪರಿಶೀಲನೆ ನಡೆಸಿ ದೂರು ನೀಡಿದ್ದು, ಕೊಲ್ಲುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. 
    ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಯುವಕರ ಪತ್ತೆಗಾಗಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ರೀತಿಯ ಘಟನೆ ಈ ಹಿಂದೆ ಚಲನಚಿತ್ರಗಳಲ್ಲಿ ತೋರಿಸಲಾಗುತ್ತಿತ್ತು. ಇದೀಗ ಹಿಂದಿನ ಕೃತ್ಯದ ಘಟನೆಗಳು ಪುನಃ ಮರುಕಳುಹಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನುಂಟು ಮಾಡಿದೆ.