ಬಿಜೆಪಿ ಎಸ್‌ಐಆರ್ ಬಳಸಿ ಕುತಂತ್ರದ ಮೂಲಕ ಚುನಾವಣೆ ಗೆಲುವು
ನಗರಸಭೆ ಹಿರಿಯ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ ಮೋಹನ್ ಆರೋಪ
ಭದ್ರಾವತಿಯಲ್ಲಿ ಶಾಸಕರ ಗೃಹ ಕಛೇರಿಯಲ್ಲಿ ಮಂಗಳವಾರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಲಾಗಿದ್ದ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ರಮದಲ್ಲಿ ನಗರಸಭೆ ಹಿರಿಯ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ ಮೋಹನ್ ಪಾಲ್ಗೊಂಡು ಮಾತನಾಡಿದರು.
- ಶಾಸಕರ ಗೃಹ ಕಛೇರಿಯಲ್ಲಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿ ಆಯೋಜನೆ.
- ಪಕ್ಷದ ನಗರ, ಗ್ರಾಮಾಂತರ ಘಟಕದ ಅಧ್ಯಕ್ಷರು ಉಪಸ್ಥಿತಿ.
- ಎಸ್‌ಐಆರ್ ಕುರಿತು ಜಾಗೃತಿ ಮೂಡಿಸಲು ಕರೆ.
ಭದ್ರಾವತಿ: ಚುನಾವಣೆ ಬಂದಾಗ ಗೆಲ್ಲಲು ಭಾರತೀಯ ಜನತಾ ಪಕ್ಷ ಅನೇಕ ರೀತಿಯ ಕುತಂತ್ರಗಳನ್ನು ನಡೆಸುತ್ತದೆ. ಈ ಪೈಕಿ ಎಸ್‌ಐಆರ್ ಸಹ ಒಂದಾಗಿದ್ದು, ಮತದಾರರು ತಮ್ಮ ಹಕ್ಕನ್ನು ಕಸಿದುಕೊಳ್ಳದಂತೆ ಎಚ್ಚರವಹಿಸಬೇಕೆಂದು ನಗರಸಭೆ ಹಿರಿಯ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ ಮೋಹನ್ ಕರೆ ನೀಡಿದರು.
ಅವರು ಶಾಸಕರ ಗೃಹ ಕಛೇರಿಯಲ್ಲಿ ಮಂಗಳವಾರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಲಾಗಿದ್ದ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತೀಯ ಜನತಾ ಪಕ್ಷ ಚುನಾವಣೆ ಗೆಲ್ಲಲು ಎಸ್‌ಐಆರ್ ಮೂಲಕ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿ, ಪಕ್ಷದ ಮತ ಬ್ಯಾಂಕ್ ಅಲ್ಲದ ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗದವರು, ದಲಿತರು ಸೇರಿದಂತೆ ಇನ್ನಿತರರ ಮತಗಳನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟು ಮತದಾನದ ಹಕ್ಕು ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂದು ದೂರಿದರು.
ದೇಶದ ಎಲ್ಲಾ ರಾಜ್ಯಗಳಲ್ಲೂ ಹಂತ ಹಂತವಾಗಿ ಎಸ್‌ಐಆರ್ ಜಾರಿಗೊಳಿಸಲು ಮುಂದಾಗುತ್ತಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಜಾರಿಗೊಳಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಆರೋಪಿಸಿ ರಾಜ್ಯದಲ್ಲೂ ಇದೀಗ ಎಸ್‌ಐಆರ್ ಪ್ರಕ್ರಿಯೆ ನಡೆಸಲು ಮುಂದಾಗಿದೆ. ಈ ಹಿನ್ನಲೆಯಲ್ಲಿ ಮತದಾರರು ಪ್ರಕ್ರಿಯೆಯಲ್ಲಿ ಎಚ್ಚರಿಕೆಯಿಂದ ಪಾಲ್ಗೊಂಡು ತಮ್ಮ ಹಕ್ಕನ್ನು ರಕ್ಷಿಸಿಕೊಳ್ಳಬೇಕೆಂದರು.
ಭಾರತೀಯ ಜನತಾ ಪಕ್ಷ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಅಣೆಕಟ್ಟು, ಕಾರ್ಖಾನೆ, ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿಲ್ಲ. ಬದಲಿಗೆ ಅನಾವಶ್ಯಕವಾಗಿ ಕೆಲವು ಕಾನೂನುಗಳನ್ನು ಬಲವಂತದಿಂದ ಜಾರಿಗೊಳಿಸಿ ದೇಶದ ಜನರ ಪ್ರಯೋಗಿಸುತ್ತಿದೆ ಎಂದು ದೂರಿದರು.
ಪ್ರಗತಿಪರ ಚಿಂತಕರು, ದಲಿತರು, ಸಂಘಟನೆಗಳು ಪಾದಯಾತ್ರೆ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿಯನ್ನುಂಟುಮಾಡುತ್ತಿದ್ದಾರೆ, ಇವರ್‍ಯಾರು ಕಾಂಗ್ರೆಸ್ ಪಕ್ಷದವರಲ್ಲ. ದೇಶದ ಉಳಿವಿಗಾಗಿ, ಅಭಿವೃದ್ಧಿಗಾಗಿ ಹೋರಾಟ ಮಾಡುತ್ತಿರುವವರು. ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸೇರಿದಂತೆ ಪ್ರತಿಯೊಬ್ಬರು ಮತದಾರರಲ್ಲಿ ಎಸ್‌ಐಆರ್ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಿಸಿಕೊಳ್ಳುವಂತೆ ಕರೆ ನೀಡಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಕ್ಷರಿ, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಬಶೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮ ಬದರಿನಾರಾಯಣ, ಸದಸ್ಯರಾದ ವಿ. ಕದಿರೇಶ್, ಮಂಜುನಾಥ್, ಚನ್ನಪ್ಪ, ಬಿ.ಟಿ ನಾಗರಾಜ್, ಸೈಯದ್ ರಿಯಾಜ್, ಬಸವರಾಜ ಬಿ. ಆನೆಕೊಪ್ಪ, ನಾಮ ನಿರ್ದೇಶಿತ ಸದಸ್ಯ ದಿಲ್ದಾರ್, ಮುಖಂಡರಾದ ರೇಣುಕಮ್ಮ ಧರ್ಮರಾಜ್, ಎಸ್.ಎಸ್ ಭೈರಪ್ಪ, ತಾ ಬಗರ್ ಹುಕುಂ ಸಮಿತಿ ಸದಸ್ಯ ಮುರುಗೇಶ್, ಕುವೆಂಪು ವಿ.ವಿ ಸಿಂಡಿಕೇಟ್ ಸದಸ್ಯ ಮುಸ್ವೀರ್ ಬಾಷಾ, ರೂಪದೇವಿ ಸೇವಾದಳದ ಜಿ.ಟಿ ಬಸವರಾಜ್, ಹನುಮಂತಪ್ಪ ಸೇರಿದಂತೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಬಿಎಲ್‌ಎ ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
