ಸುಲ್ತಾನಮಟ್ಟಿ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ
ಪೂರ್ವ ಪ್ರಾಥಮಿಕ ಶಾಲೆಗೆ ಚಾಲನೆ
ಭದ್ರಾವತಿ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ಪ್ರಾರಂಭೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಅಲ್ಲದೆ ಶಾಲೆ ಪೂರ್ವ ಪ್ರಾಥಮಿಕ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಚಾಲನೆ ನೀಡಲಾಯಿತು.
ಭದ್ರಾವತಿ : ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಅರಳಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಲ್ತಾನಮಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ಪ್ರಾರಂಭೋತ್ಸವ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಅಲ್ಲದೆ ಶಾಲೆ ಪೂರ್ವ ಪ್ರಾಥಮಿಕ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಚಾಲನೆ ನೀಡಲಾಯಿತು.
ಪ್ರಸ್ತುತ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಇಂತಹ ಸಂದರ್ಭದಲ್ಲಿ ವಿನೂತನ ಪ್ರಯೋಗಗಳ ಮೂಲಕ ನಿರಂತರ ಪ್ರಯತ್ನದ ಫಲವಾಗಿ ಶಾಲಾ ದಾಖಲಾತಿಯಲ್ಲಿ ಸುಧಾರಣೆ ಕಂಡುಕೊಳ್ಳುವಲ್ಲಿ ಈ ಶಾಲೆ ಯಶಸ್ವಿಯಾಗಿದೆ. ಖಾಸಗಿ ಶಾಲೆಗಳನ್ನು ಮೀರಿಸುವಂತೆ ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಜಾನಪದ ಕಲಾವಿದ ಎಂ.ಆರ್ ರೇವಣಪ್ಪರವರು ಶಾಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಲಕ್ಷಾಂತರ ರು. ತಮ್ಮ ಸ್ವಂತ ಹಣ ವ್ಯಯವಾಡಿದ್ದಾರೆ. ಇವರ ಜೊತೆ ಮತ್ತೊಬ್ಬ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಚಕ್ರಸಾಲಿಯವರು ಸಹ ಕೈಜೋಡಿಸಿದ್ದಾರೆ.
ಶಾಲೆಗೆ ಸಂಪೂರ್ಣವಾಗಿ ಸುಣ್ಣ-ಬಣ್ಣ ಬಳಿಲಾಗಿದ್ದು, ಶಾಲಾ ಕೊಠಡಿಗಳನ್ನು ಆಕರ್ಷಕವಾಗಿ ರೂಪಿಸಲಾಗಿದೆ. ಗ್ರಾಮದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದು, ಈ ಹಿನ್ನಲೆಯಲ್ಲಿ ಸಮೀಪದ ಗ್ರಾಮಗಳಿಂದ ಪೋಷಕರ ಮನವೊಲಿಸಿ ಮಕ್ಕಳನ್ನು ಕರೆ ತಂದು ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
೧ನೇ ತರಗತಿಯಿಂದ ೫ನೇ ತರಗತಿವರೆಗೆ ಇಂಗ್ಲೀಷ್ ಹಾಗು ಕನ್ನಡ ಮಾಧ್ಯಮದಲ್ಲಿ ಬೋಧನೆ, ಸ್ಮಾರ್ಟ್ ಕ್ಲಾಸ್ ಬೋಧನೆ, ಗ್ರಂಥಾಲಯ ವ್ಯವಸ್ಥೆ, ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯ ವ್ಯವಸ್ಥೆ, ವರ್ಣರಂಜಿತ, ಅಂದವಾದ ಬೋಧನಾ ಕೊಠಡಿ, ಕಂಪ್ಯೂಟರ್ ಕಲಿಕೆ, ಎರಡು ಜೊತೆ ಸಮವಸ್ತ್ರ ವಿತರಣೆ, ಮಧ್ಯಾಹ್ನದ ಬಿಸಿ ಊಟದ ಯೋಜನೆ, ಕ್ರೀರ ಭಾಗ್ಯ, ಮೊಟ್ಟೆ ಬಾಳೆಹಣ್ಣು ವಿತರಣೆ, ಉತ್ತಮವಾದ ಪೀಠೋಪಕರಣಗಳು ಹಾಗು ಪಾಠೋಲಪಕರಣಗಳನ್ನು ಒಳಗೊಂಡಿದೆ.
ಶಾಲಾ ಪ್ರಾರಂಭೋತ್ಸವದ ಜೊತೆಗೆ ಪೂರ್ವ ಪ್ರಾಥಮಿಕ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಚಾಲನೆ ನೀಡಲಾಯಿತು. ಹಿರಿಯೂರು ಕ್ಲಸ್ಟರ್ ಸಿಆರ್‌ಪಿ ವೇಣುಗೋಪಾಲ್, ಶಾಲೆಯ ಶಿಕ್ಷಕರಾದ ಎಂ.ಆರ್ ರೇವಣಪ್ಪ, ಚಂದ್ರಶೇಖರ ಚಕ್ರಸಾಲಿ ಹಾಗು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಪೋಷಕರು ಉಪಸ್ಥಿತರಿದ್ದರು. ಶಾಲೆಯನ್ನು ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು.
