ನಾಯಕತ್ವ ಎಂಬುದು ಕೇವಲ ಅಧಿಕಾರ ಅನುಭವಿಸುವುದಲ್ಲ, ಬದಲಾವಣೆ, ನೆಮ್ಮದಿಯನ್ನುಂಟು ಮಾಡುವುದು : ಪ್ರಕಾಶ್ ರಾಥೋಡ್

ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ, ಕಾರ್ಯದರ್ಶಿಯಾಗಿ ವಿನೋದ್ ಗಿರಿ ಪದಗ್ರಹಣ



ಭದ್ರಾವತಿ ಲಯನ್ಸ್ ಕ್ಲಬ್ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ ಪದಗ್ರಹಣ ಸ್ವೀಕರಿಸಿದರು.

    ಭದ್ರಾವತಿ : ಯಾವುದೇ ಸಂಘ-ಸಂಸ್ಥೆಗಳಲ್ಲಿ ಪದವಿ, ನಾಯಕತ್ವ ಎಂಬುದು ಕೇವಲ ಅಧಿಕಾರ ಅನುಭವಿಸುವುದಲ್ಲ. ತಮ್ಮ ಅವಧಿಯಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರುವುದು, ನೆಮ್ಮದಿಯನ್ನುಂಟು ಮಾಡುವುದು. ತಮ್ಮ ಕೈಲಾದ ಸೇವೆ ಮಾಡುವುದಾಗಿದೆ ಎಂದು ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಹೇಳಿದರು.

    ಅವರು ನಗರದ ನ್ಯೂಟೌನ್ ಲಯನ್ಸ್ ಕ್ಲಬ್ ಭವನದಲ್ಲಿ ೨೦೨೬-೨೭ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

    ಲಯನ್ಸ್ ಕ್ಲಬ್ ವಿಶ್ವದಾದ್ಯಂತ ಮಾನವೀಯ ಸೇವೆಗೆ ಮುಂದಾಗಿ ಸಮಾಜದ ವಿವಿಧ ಸೇವಾ ಚಟುವಟಿಕೆಗಳ ಮೂಲಕ ಜನರಲ್ಲಿ ನೆಮ್ಮದಿಯ ಆಶಾಕಿರಣ ಮೂಡಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಸೇವೆ ಮಾಡಲು ಅಧಿಕಾರ, ಸಮಯ ಅಥವಾ ಯಾರನ್ನೂ ಎದುರು ನೋಡುವುದಲ್ಲ. ಸದಾ ನಮ್ಮ ಕೈಲಾದಷ್ಟು ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅಧಿಕಾರ ಎಂಬುದು ನಿಂತ ನೀರಲ್ಲ. ಸೇವೆ ಮಾಡಲು ಹೆಚ್ಚಿನ ಅವಕಾಶ ಲಭಿಸಿದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಾವು ಮಾಡಿರುವ ಸೇವೆಗಳು ನಮ್ಮ ಜೀವನದಲ್ಲಿ ಕೊನೆಯವರೆಗೂ ಉಳಿಯಲಿವೆ ಎಂದರು.

    ಸಮಾಜವನ್ನು ಅಭಿವೃದ್ದಿಯ ಕಡೆಗೆ ಕೊಂಡೊಯ್ಯುವುದು ಕೇವಲ ಸರ್ಕಾರದ ಕೆಲಸವಲ್ಲ. ಅದು ಸಂಘ-ಸಂಸ್ಥೆಗಳು, ಸಮಾಜದ ಸಹೃದಯರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಮಾತ್ರ ಸಾಧ್ಯ. ಸಮಾಜದಿಂದ ನಮಗೆ ಏನು ಸಿಗುತ್ತದೆ ಎಂಬಂತಹ ವಾತಾವರಣ ಇರುವ ಮನೋಭಾವ ಹೊಂದಿರುವ ಜನರ ಮಧ್ಯೆ ನಿಸ್ವಾರ್ಥವಾಗಿ ತಾನು ಸಮಾಜಕ್ಕೆ ಏನು ಕೊಡಬೇಕು ಎಂಬ ಉದ್ದೇಶ ಹೊಂದಿರಬೇಕು. ಆಗ ಮಾತ್ರ ಸಮಾಜ ಹೊಸ ದಿಕ್ಕಿನ ಕಡೆಗೆ ಸಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಬದುಕಿಗೆ ಹಣ ಬೇಕು, ಆದರೆ ಹಣವೇ ಬದುಕಲ್ಲ ಎಂಬದನ್ನು ಅರಿತಾಗ ನೆಮ್ಮದಿಯ ಸಮಾಜ ಕಾಣಲು ಸಾಧ್ಯ ಎಂದರು.

    ಯಶಸ್ಸು ಎಂದರೆ ನಾವು ಮತ್ತೊಬ್ಬರ ಮುಖದಲ್ಲಿ ಮಂದಹಾಸ ಮೂಡಿಸುವುದು. ಅವರ ಸಂಕಟವನ್ನು ನಮ್ಮ ಕೈಲಾದ ಮಟ್ಟಿಗೆ ದೂರವಾಗಿಸುವುದು. ಕಷ್ಟಕ್ಕೆ ಸಹಾಯ ಮಾಡುವ ಸಂಗತಿಗಳೇ ನಿಜವಾದ ಯಶಸ್ಸು. ಅಂತಹ ಮಾನವೀಯ ಕಾರ್ಯ ಲಯನ್ಸ್ ಸಂಸ್ಥೆ ಮಾಡುತ್ತಿದೆ ಎಂದರು.

    ಮೊಬೈಲ್ ವೀಕ್ಷಣೆಗಿಂತ ಪುಸ್ತಕಗಳ ಓದುವ ಹವ್ಯಾಸ ಬೆಳೆಸಿಕೊಳ್ಳುವುದು ಅತ್ಯಂತ ಶ್ರೇಷ್ಠ. ಅದು ನಮ್ಮಗಳ ಭವಿಷ್ಯದ ಬದುಕಿಗೆ ಈಗಾಗಲೇ ತಳಪಾಯ ಹಾಕುವುದರ ಮೂಲಕ ಉತ್ತಮ ಯೋಜನೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆಗ ಬದುಕು ಉತ್ತಮವಾಗಿ ಹಸನಾಗುತ್ತದೆ. ಉತ್ತಮವಾದ ಹವ್ಯಾಸಗಳನ್ನು ಬೆಳೆಸಿಕೊಳ್ಳದಿದ್ದರೆ ಮನುಷ್ಯನ ದೇಹ ಹಾಗು ಮನಸ್ಸು ಆನಾರೋಗ್ಯಕ್ಕೆ ಈಡಾಗುತ್ತದೆ ಎಂದರು.

    ಲಯನ್ಸ್ ನೂತನ ಪದಾಧಿಕಾರಿಗಳು :

    ಲಯನ್ಸ್ ಕ್ಲಬ್ ೨೦೨೬-೨೭ನೇ ಸಾಲಿನ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ, ಕಾರ್ಯದರ್ಶಿಯಾಗಿ ವಿನೋದ್ ಗಿರಿ, ಖಜಾಂಚಿಯಾಗಿ ಎಚ್.ಎಸ್ ಮಂಜುನಾಥ್, ಲಿಯೋ ಕ್ಲಬ್ ಅಧ್ಯಕ್ಷರಾಗಿ ಪಿ. ಧೃವ, ಕಾರ್ಯದರ್ಶಿಯಾಗಿ ಜೆ. ಸಿರಿ ಮತ್ತು ಖಜಾಂಚಿಯಾಗಿ ಎಸ್. ಹರ್ಷ ಪದಗ್ರಹಣ ಸ್ವೀಕರಿಸಿದರು. ಲಯನ್ಸ್ ೩೧೭ಸಿ ಮಾಜಿ ಜಿಲ್ಲಾ ಗೌರ್‍ನರ್ ಎಚ್.ಎನ್ ಶಿವಕುಮಾರ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. 

     ವಿವಿಧ ಘಟಕಗಳ ಪದಾಧಿಕಾರಿಗಳಾದ ಡಾ.ಎಂ. ಸುರೇಶ್, ಗಿರೀಶ್ ಕೆ ನಾಯಕ್, ಶೇಖರಪ್ಪ,  ೨೦೨೫-೨೬ನೇ ಸಾಲಿನ ನಿರ್ಗಮಿತ ಪದಾಧಿಕಾರಿಗಳಾದ ಅಧ್ಯಕ್ಷ ನಾಗರಾಜ್ ಎಂ ಶೇಟ್,  ಕಾರ್ಯದರ್ಶಿ ಜಿ.ಆರ್.ದರ್ಶನ್ ಮತ್ತು ಖಜಾಂಚಿ ಬಿ. ನಟರಾಜ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

    ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗೌರ್‍ನರ್ ಬಿ. ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಯಂತಿ ಎನ್ ಶೇಟ್ ಪ್ರಾರ್ಥಿಸಿ, ಅಮೃತ ದರ್ಶನ್, ಎಲ್. ದೇವರಾಜ್ ಅತಿಥಿಗಳ ಪರಿಚಯ ಮಾಡಿದರು. ದಿವಾಕರ ಕಾರ್ಯಕ್ರಮ ನಿರೂಪಿಸಿ, ವಿನೋದ್ ಗಿರಿ ವಂದಿಸಿದರು.  ಕಾರ್ಯಕ್ರಮದಲ್ಲಿ ಭದ್ರಾ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಶಾಖೆ ವತಿಯಿಂದ ನೂತನ ಪದಾಧಿಕಾರಿಗಳನ್ನು ವಿಶೇಷವಾಗಿ ಅಭಿನಂದನಾ ಸಲ್ಲಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. 

 


ಭದ್ರಾವತಿ ಲಯನ್ಸ್ ಕ್ಲಬ್ ೨೦೨೬-೨೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಡಿ. ಶಂಕರಮೂರ್ತಿ ಪದಗ್ರಹಣ ಸ್ವೀಕರಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಶಾಖೆ ವತಿಯಿಂದ ನೂತನ ಪದಾಧಿಕಾರಿಗಳನ್ನು ವಿಶೇಷವಾಗಿ ಅಭಿನಂದನಾ ಸಲ್ಲಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.