ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ಭದ್ರಾವತಿ ನಗರದ ಹೊಸ ಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಬುಧವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
ಭದ್ರಾವತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ನಗರದ ಹೊಸ ಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಬುಧವಾರ ರಾಷ್ಟ್ರೀಯ ವೈದ್ಯರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಸಿದ್ದಬಸಪ್ಪ ಕಾರ್ಯಕ್ರಮ ಉದ್ಘಾಟಿಸಿ ರಾಷ್ಟ್ರೀಯ ವೈದ್ಯರ ದಿನಾಚರಣೆ ಮಹತ್ವ ವಿವರಿಸಿದರು. ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸ ಪೂರೈಸಿ ಪ್ರಸ್ತುತ ವೈದ್ಯರಾಗಿ ನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಡಾ. ಅರ್ಬಿಯಾ ಅಂಜುಮ್ ಹಾಗೂ ಡಾ. ಟಿ.ಬಿ ಪ್ರಭಾಕರ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಅರ್ಬಿಯಾ ಅಂಜುಮ್ ಮತ್ತು ಡಾ. ಟಿ.ಬಿ ಪ್ರಭುದೇವ ವಿದ್ಯಾಸಂಸ್ಥೆಯಲ್ಲಿ ತಮ್ಮ ಬಾಲ್ಯದ ದಿನಗಳು, ತಾವು ಸಾಗಿಬಂದ ಹಾದಿ, ತಮ್ಮ ವಿದ್ಯಾರ್ಥಿ ಜೀವನ ಹಾಗೂ ವಿದ್ಯಾಸಂಸ್ಥೆಯಲ್ಲಿ ತಮಗೆ ಮಾರ್ಗದರ್ಶಕರಾಗಿ ಮತ್ತು ಪ್ರೇರಣೆಯಾಗಿರುವಂತಹ ಶಿಕ್ಷಕರನ್ನು ಸ್ಮರಿಸಿ, ಗೌರವ ಸಮರ್ಪಣೆ ಮಾಡಿದರು. ಕಠಿಣ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಯಾವುದೇ ಗುರಿಯನ್ನು ಮುಟ್ಟಬಹುದು ಎಂಬ ಮಾರ್ಗದರ್ಶನವನ್ನು ವಿದ್ಯಾರ್ಥಿಗಳಿಗೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ ರಾಕೇಶ್ ಮಾತನಾಡಿ, ವಿದ್ಯಾಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ರಾಷ್ಟ್ರೀಯ ವೈದ್ಯರ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ವಿದ್ಯಾಸಂಸ್ಥೆಯಲ್ಲಿ ಓದಿ ಸಾಧಕರಾಗಿರುವ ಹಲವಾರು ವಿದ್ಯಾರ್ಥಿಗಳ ಯಶಸ್ಸು ಮುಂದಿನ ಪೀಳಿಗೆಗೆ ಮಾರ್ಗದರ್ಶನ ಹಾಗೂ ಪ್ರೇರಣಾದಾಯಕ ಎಂದರು.
ಎಲ್ಲಾ ವಿಭಾಗಗಳ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಎಂ. ಯಶವಂತ್ ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕ ರವಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಪಿ. ರೇವತಿ ವೈದ್ಯರ ಪರಿಚಯ ಮಾಡಿಕೊಟ್ಟರು. ಶಿಕ್ಷಕರಾದ ಕವಿತಾ ಕಾರ್ಯಕ್ರಮ ನಿರೂಪಿಸಿ, ಜಿ.ಎ ಹಿತೇಶ್ ವಂದಿಸಿದರು.
