ಎಸ್‌ಐಆರ್ ಚುನಾವಣಾ ಕರ್ತವ್ಯ ನಿರ್ವಹಿಸುವಾಗ ಅಂಗನವಾಡಿ ಕಾರ್ಯಕರ್ತೆ ಸಾವು



ಮಂಜುಳಾ 
    ಭದ್ರಾವತಿ :  ತಾಲೂಕಿನ ಕಲ್ಲಾಪುರ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮಂಜುಳಾ (೫೨) ಎಸ್‌ಐಆರ್ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾವನ್ನಪ್ಪಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. 
    ಇವರಿಗೆ ಪತಿ ಹಾಗು ಓರ್ವ ಪುತ್ರ ಇದ್ದಾರೆ. ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕಳೆದ ೩೦ ವರ್ಷಗಳಿಂದ ಕಾರ್ಯಕರ್ತೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಸ್‌ಐಆರ್ ಚುನಾವಣಾ ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ತಾಲೂಕು ಸರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.  ಮಾಹಿತಿ ತಿಳಿದ ತಕ್ಷಣ ತಹಸಿಲ್ದಾರ್ ಪ್ರದೀಪ್ ದೇವಗಿರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಪೊಲೀಸ್ ಮತ್ತು ಇನ್ನಿತರ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ರೈತ ಪ್ರಮುಖರಾದ ಜಯರಾಂ ಗೊಂದಿ, ಗಜೇಂದ್ರ ಹಾಗು ಮೃತರ ಕುಟುಂಬ ವರ್ಗದವರು ಆಸ್ಪತ್ರೆಗೆ ಜಮಾಯಿಸಿದ್ದರು.  ಸಂಜೆ ೫ ಗಂಟೆವರೆಗೂ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ವರದಿ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.