೨-೩ ದಿನಗಳಿಂದ ವ್ಯಾಪಕ ಮಳೆ : ರೈತರ ಮೊಗದಲ್ಲಿ ಮಂದಹಾಸ
ಭದ್ರಾವತಿ ವಿಐಎಸ್‌ಎಲ್-ಎಂಪಿಎಂ ರಸ್ತೆಯ ಜೆಟಿಎಸ್ ಶಾಲೆ ಬಳಿ ಬೃಹತ್ ಮರದ ರೆಂಬೆ-ಕೊಂಬೆ ಮುರಿದು ಬಿದ್ದು, ವಿದ್ಯುತ್ ಕಂಬ ಹಾನಿಗೊಳಗಿದ್ದು, ಮೆಸ್ಕಾಂ ಸಿಬ್ಬಂದಿಗಳು ತಕ್ಷಣ ಕಾರ್ಯಾಚರಣೆ ಕೈಗೊಂಡು ಹೊಸದಾಗಿ ವಿದ್ಯುತ್ ಕಂಬ ಅಳವಡಿಸಿದರು.
-ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಲ್ಲಿ ರೈತರ ಆತಂಕ ದೂರ.
- ಈಗಾಗಲೇ ಭದ್ರಾ ಎಡ-ಬಲ ದಂಡೆ ನಾಲೆಗಳಲ್ಲಿ ನೀರು ಸ್ಥಗಿತ.
- ಜಲಾಶಯದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ.
- ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳ
ಭದ್ರಾವತಿ: ತಾಲೂಕಿನಲ್ಲಿ ಕಳೆದ ೨-೩ ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಇದುವರೆಗೂ ಯಾವುದೇ ಹಾನಿ ಅಥವಾ ಸಮಸ್ಯೆಗಳು ಎದುರಾಗಿಲ್ಲ.
ಮಳೆಯಾಗುತ್ತಿರುವುದರಿಂದ ಬರಗಾಲ ಎದುರಾಗುವ ಭೀತಿಯಲ್ಲಿದ್ದ ರೈತರ ಮೊಗದಲ್ಲಿ ಸ್ವಲ್ಪಮಟ್ಟಿಗೆ ಮಂದಹಾಸ ಮೂಡಿದಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದಲ್ಲಿ ಭೀತಿ ದೂರವಾಗಲಿದೆ. ಈ ಬಾರಿ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದ್ದು, ಎಡ ಮತ್ತು ಬಲ ದಂಡೆ ನಾಲೆಗಳಲ್ಲಿ ನೀರು ಸ್ಥಗಿತಗೊಳಿಸಲಾಗಿದೆ. ಜಲಾಶಯದ ನೀರು ಕೇವಲ ಕುಡಿಯುವ ಬಳಕೆಗೆ ಮಾತ್ರ ಸೀಮಿತಗೊಳಿಸಲಾಗಿದೆ. ರೈತರು ಬೆಳೆ ಬೆಳೆಯದಂತೆ ಸೂಚಿಸಲಾಗಿದೆ. ಈ ನಡುವೆ ಇದೀಗ ಮಳೆಯಾಗುತ್ತಿದ್ದು, ಸ್ವಲ್ಪಮಟ್ಟಿಗೆ ಸಮಾಧಾನ ತಂದಿದೆ. ತರೀಕೆರೆ, ಎನ್.ಆರ್ ಪುರ, ಚಿಕ್ಕಮಗಳೂರು, ತೀರ್ಥಹಳ್ಳಿ ಸೇರಿದಂತೆ ಜಲಾಶಯದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.
ಸಾಧಾರಣ ಮಳೆಯಿಂದಾಗಿ ಬೀದಿಬದಿ ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿಗೆ ತೊಂದರೆಯಾಗಿದೆ. ಕೆಲವು ರಸ್ತೆಗಳ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು, ಹಳ್ಳಕೊಳ್ಳಗಳಲ್ಲಿ ನೀರು ನಿಂತುಕೊಂಡಿದೆ. ಇದರಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಮಳೆ ನಡುವೆ ಕೆಲವು ರಸ್ತೆ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಸಾಕಷ್ಟು ನಷ್ಟ ಉಂಟಾಗುತ್ತಿದೆ. ಈಗಾಗಲೇ ಕೈಗೊಂಡಿರುವ ಕೆಲವು ಕಾಮಗಾರಿಗಳು ಹಾಳಾಗಿವೆ. ಉಳಿದಂತೆ ಮಳೆ ಗಾಳಿಗೆ ಕೆಲವೆಡೆ ಮರದ ರೆಂಬೆ-ಕೊಂಬೆಗಳು ಮುರಿದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ. ಅಲ್ಲಲ್ಲಿ ವಿದ್ಯುತ್ ಅಡಚಣೆ ಕಂಡು ಬರುತ್ತಿದೆ.

.jpeg)