ಕುಟುಂಬ ಪ್ರೀತಿಯೊಂದಿಗೆ ಗಮನ ಸೆಳೆಯುತ್ತಿವೆ ಬಗೆ ಬಗೆಯ ಪಾರಿವಾಳಗಳು

ಮೂಡನಂಬಿಕೆ, ಕಂದಾಚಾರಗಳ ನಡುವೆ ಮರೆಯಾಗುತ್ತಿದೆ ಪಾರಿವಾಳಗಳ ಪೋಷಣೆ 


ಭದ್ರಾವತಿ ನಗರಸಭೆ ವ್ಯಾಪ್ತಿಯ ಸೀಗೆಬಾಗಿ ನಿವಾಸಿ ಅಣ್ಣೇಶ್-ಎಂ. ಆಶಾ ದಂಪತಿ ನಿವಾಸದಲ್ಲಿ ಸಾಕಿರುವ ಪಾರಿವಾಳಗಳು. 
    * ಅನಂತಕುಮಾರ್  
    ಭದ್ರಾವತಿ: ಹಿಂದಿನ ಕಾಲದಲ್ಲಿ ಸಾಕು ಪ್ರಾಣಿ ಹಾಗು ಪಕ್ಷಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಭಾವಿಸಲಾಗುತ್ತಿತ್ತು. ಒಂದು ರೀತಿಯ ಬಾಂಧವ್ಯ ಬೆಸೆದುಕೊಳ್ಳಲಾಗಿತ್ತು. ಆದರೆ ಇಂದು ಈ ರೀತಿಯ ಭಾವನೆಗಳನ್ನು ಹೊಂದಿರುವ ಕುಟುಂಬಗಳು ವಿರಳವಾಗಿವೆ.  ನಗರಸಭೆ ವ್ಯಾಪ್ತಿಯ ಸೀಗೆಬಾಗಿ ನಿವಾಸಿ ಅಣ್ಣೇಶ್-ಎಂ. ಆಶಾ ದಂಪತಿ ಇಂತಹ ವಿರಳ ಕುಟುಂಬಗಳಲ್ಲಿ ಒಂದಾಗಿದೆ. ಮನೆ ತುಂಬಾ ಪಾರಿವಾಳ, ಜೊತೆಗೆ ಕೋಳಿ, ನಾಯಿ ಸಹ ಈ ಕುಟುಂಬದ ಸದಸ್ಯರಾಗಿವೆ. ಇದು ಇಲ್ಲಿನ ನಿವಾಸಿಗಳ ಗಮನ ಸೆಳೆಯುತ್ತಿದೆ. 
    ಅಣ್ಣೇಶ್-ಎಂ. ಆಶಾ ದಂಪತಿ ಕುಟುಂಬದವರು ಮೊದಲಿನಿಂದಲೂ ಸಾಕು ಪ್ರಾಣಿ, ಪಕ್ಷಿಗಳನ್ನು ತಮ್ಮ ಕುಟುಂಬ ಸದಸ್ಯರಂತೆ ಕಾಣುತ್ತಿದ್ದು, ಇದೀಗ ಇವರ ಇಬ್ಬರು ಮಕ್ಕಳಾದ ಗೌತಮ್ ಮತ್ತು ಪ್ರೀತಂ ಸಹ ಈ ದಾರಿಯಲ್ಲಿ ಸಾಗುತ್ತಿದ್ದಾರೆ. ಕಳೆದ ೬ ವರ್ಷಗಳಿಂದ ಇವರ ಮನೆಯಲ್ಲಿ ವಿವಿಧ ಜಾತಿಯ ಪಾರಿವಾಳ, ಕೋಳಿ ಹಾಗು ನಾಯಿ ಸೇರಿದಂತೆ ಇನ್ನಿತರ ಸಾಕು ಪ್ರಾಣಿಗಳ ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. 
    ತಲೆಯ ಸುತ್ತಲೂ ಗರಿಗಳ ಸುಂದರವಾದ ಹೂಮಾಲೆಯಂತಹ ರಚನೆಯನ್ನು ಹೊಂದಿ ಮುಖವನ್ನು ಮುಚ್ಚಿದಂತೆ ಆಕರ್ಷಕವಾಗಿ ಕಾಣುವ ಜಾಕೋಬಿನ್, ಆತ್ಯಂತ ಆಕರ್ಷಕವಾಗಿ ಕಾಣುವ ಬಿಳಿ ಬಣ್ಣದ ತಾರಾ, ಹಾರುವಾಗ ಗಾಳಿಯಲ್ಲಿ ಯೂ-ಟರ್ನ್ ಮತ್ತು ಉಲ್ಟಾ ಹೊಡೆಯುವ ಕೌಶಲ್ಯಕ್ಕೆ ಹೆಸರಾಗಿರುವ ಟಂಬ್ಲರ್, ವಿಶೇಷವಾಗಿ ಗಿರೆಬಾಜಿ(ಹಾರಾಟ) ಮತ್ತು ಪ್ರದರ್ಶನಕ್ಕಾಗಿ ಸಾಕಲಾಗುವ ಅತ್ಯಂತ ಜನಪ್ರಿಯ ಪಾರಿವಾಳ ತಳಿಗಳಲ್ಲಿ ಒಂದಾಗಿರುವ ಗಾಢ ಬೂದು ಬಣ್ಣದ ಗರಿಗಳನ್ನು ಹೊಂದಿರುವ ಸಬ್ಜಾ ಪಾರಿವಾಳ, ಬಣ್ಣ ಮತ್ತು ಆಕರ್ಷಕ ಮೈಕಟ್ಟು ಹೊಂದಿರುವ ರಾಜ್ಯದಲ್ಲಿ ಹೆಚ್ಚಾಗಿ ಸಾಕಲ್ಪಡುವ ಧೂಮ ಪಾರಿವಾಳ  ಸೇರಿದಂತೆ ಒಟ್ಟು ವಿವಿಧ ಜಾತಿಯ ಸುಮಾರು ೪೦ಕ್ಕೂ ಹೆಚ್ಚು ಪಾರಿವಾಳಗಳು ಇವರ ಪೋಷಣೆಯಲ್ಲಿವೆ. 


    ಪಾರಿವಾಳ ಸಾಕುವುದು ಸಹ ಒಂದು ಕಲೆಯಾಗಿದೆ. ಎಲ್ಲರಿಗೂ ಪಾರಿವಾಳ ಸಾಕಲು ಸಾಧ್ಯವಿಲ್ಲ. ಅವುಗಳ ಬಗ್ಗೆ ಕಾಳಜಿ ಹೊಂದಿರುವ, ಅವುಗಳ ಜೀವನ ಕ್ರಮ ತಿಳಿದಿರುವವರು ಮಾತ್ರ ಪಾರಿವಾಳ ಸಾಕಲು ಸಾಧ್ಯ. ರಾಗಿ, ಜೋಳ, ಬಗೆ ಬಗೆಯ ಮಿಶ್ರಣ ಹೊಂದಿರುವ ದ್ವಿದಳ ಧಾನ್ಯಗಳು ಹಾಗು ಗೋಡಂಬಿ, ದ್ರಾಕ್ಷಿ, ಖರ್ಜೂರ ಸೇರಿದಂತೆ ಒಣ ಹಣ್ಣುಗಳು ಇವುಗಳ ಆಹಾರವಾಗಿದೆ. ಪಾರಿವಾಳಗಳ ಪೋಷಣೆಗಾಗಿ ಪ್ರತಿತಿಂಗಳು ಸಾವಿರಾರು ರು. ವ್ಯಯಮಾಡಬೇಕಾಗಿದೆ. 
    ವಯಸ್ಕ ಪಾರಿವಾಳಗಳು ಸಂಯೋಗದ ನಂತರ ಹೆಣ್ಣು ಪಾರಿವಾಳ ಸಂತಾನೋತ್ಪತ್ತಿ ೧೫ ರಿಂದ ೧೮ ದಿನಗಳಲ್ಲಿ ಮೊಟ್ಟೆ ಇಡುತ್ತದೆ. ಒಂದು ಅವಧಿಯಲ್ಲಿ ೨ ಮೊಟ್ಟೆಗಳನ್ನಿಡುತ್ತದೆ. ಮೊದಲ ಮೊಟ್ಟೆ ಇಟ್ಟ ನಂತರ ೧ ಅಥವಾ ೨ ದಿನಗಳ ನಂತರ ಮತ್ತೊಂದು ಮೊಟ್ಟೆ ಇಡುತ್ತದೆ. ಈ ಮೊಟ್ಟೆಗಳು ೧೮ ರಿಂದ ೧೯ ದಿನಗಳವರೆಗೆ ಕಾವು ಪಡೆದು ಮರಿಗಳು ಹೊರ ಬರುತ್ತವೆ. ಆಯಾ ಜಾತಿಯ ಪಾರಿವಾಳಗಳು ಒಂದೊಂದು ದರದಲ್ಲಿ ಮಾರಾಟಗೊಳ್ಳುತ್ತವೆ. ಕನಿಷ್ಠ ೧ ಸಾವಿರ ರು. ನಿಂದ ೫ ಸಾವಿರ ರು.ಗಳವರೆಗೆ ಮಾರಾಟಗೊಳ್ಳುತ್ತವೆ. 
    ಪಾರಿವಾಳ ಸಾಕುವುದನ್ನು ಒಂದು ಹವ್ಯಾಸವನ್ನಾಗಿಸಿಕೊಂಡಿರುವ ಈ ಕುಟುಂಬ ಯಾರಿಗಾದರೂ ಪಾರಿವಾಳ ಬೇಕಾದರೆ ಮಾರಾಟ ಸಹ ಮಾಡುತ್ತದೆ. ಪ್ರಾಣಿ, ಪಕ್ಷಿಗಳು ಸಹ ನಮ್ಮಂತೆ ಎಂಬುವ ಮನೋಭಾವ ಪ್ರತಿಯೊಬ್ಬರ ಬೆಳೆಸಕೊಳ್ಳಬೇಕೆಂಬ ಆಶಯ ಕುಟುಂಬದ್ದಾಗಿದೆ. 
  ಮೂಡನಂಬಿಕೆ, ಕಂದಾಚಾರಗಳ ನೆಪವೊಡ್ಡಿ ಪಾರಿವಾಳಗಳನ್ನು ಮನೆಗಳಲ್ಲಿ ಸಾಕಲು ಬಹುತೇಕ ಮಂದಿ ಹಿಂಜರಿಯುತ್ತಾರೆ. ಎಲ್ಲಾ ಪ್ರಾಣಿ, ಪಕ್ಷಿಗಳಲ್ಲೂ ಒಂದೊಂದು ವಿಶಿಷ್ಟತೆ ಇರುತ್ತದೆ. ಅವುಗಳು ನಮ್ಮಂತೆ ಬದುಕು ಕಟ್ಟಿಕೊಂಡಿರುತ್ತವೆ. ಪಾರಿವಾಳಗಳನ್ನು ಸಾಕುವವರು ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ಮನುಷ್ಯರಿಗೆ ಯಾವುದೇ ರೀತಿಯ ರೋಗಗಳು ಹರಡುವುದಿಲ್ಲ. ಪಾರಿವಾಳಗಳನ್ನು ಸಾಕುವುದರಿಂದ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ.  
                                                                              - ಎಂ. ಆಶಾ, ಸೀಗೆಬಾಗಿ ನಿವಾಸಿ, ಭದ್ರಾವತಿ.