ವ್ಯಾಪಾರಸ್ಥರಿಂದ ಪಾದಚಾರಿಗಳಿಗೆ ಕಿರಿ ಕಿರಿ : ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಿ
ನಗರಸಭೆ ಆಡಳಿತಕ್ಕೆ ಸಾರ್ವಜನಿಕರ ಆಗ್ರಹ
ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಡಾ. ರಾಜಕುಮಾರ್ ರಸ್ತೆ ಹಾಗು ಬಿ.ಎಚ್ ರಸ್ತೆಯ ಪಾದಚಾರಿ ಪಥ ಅಂಗಡಿ-ಮುಂಗಟ್ಟು ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವುದು.
ಭದ್ರಾವತಿ: ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಎರಡು ಬದಿಯಲ್ಲಿ ಪಾದಚಾರಿ ಪಥ(ಫುಟ್‌ಪಾತ್) ನಿರ್ಮಿಸಲಾಗಿದ್ದರೂ ಸಹ ವ್ಯಾಪಾರಸ್ಥರು ಆಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ. ನಗರಸಭೆ ಆಡಳಿತ ತಕ್ಷಣ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೋಟ್ಯಾಂತರ ರು. ವೆಚ್ಚದಲ್ಲಿ ನಗರಸಭೆ ವಾರ್ಡ್ ನಂ.೩ರ ಡಾ. ರಾಜಕುಮಾರ್ ರಸ್ತೆ ಹಾಗು ಬಿ.ಎಚ್ ರಸ್ತೆಯನ್ನು ಅಗಲೀಕರಣಗೊಳಿಸಿ ರಸ್ತೆ ಎರಡು ಬದಿ ಪಾದಚಾರಿ ಪಥ ನಿರ್ಮಿಸಿ ಅಭಿವೃದ್ಧಿಪಡಿಸಲಾಗಿದ್ದು, ಆದರೆ ರಸ್ತೆಯಲ್ಲಿನ ಅಂಗಡಿ-ಮುಂಗಟ್ಟುಗಳ ವ್ಯಾಪಾರಸ್ಥರು ಪಾದಚಾರಿ ಪಥ ಆಕ್ರಮಿಸಿಕೊಂಡಿದ್ದು, ವ್ಯಾಪಾರಸ್ಥರು ತಮ್ಮ ಸರಕು, ಸಾಮಾಗ್ರಿಗಳನ್ನು ಪ್ರದರ್ಶನಕ್ಕೆ ಇಡುತ್ತಿದ್ದಾರೆ. ಇದರಿಂದ ಪಾದಚಾರಿಗಳ ಸಂಚಾರಕ್ಕೆ ಕಿರಿ ಕಿರಿಯಾಗುತ್ತಿದೆ.
ಕೆಲವು ವರ್ಷಗಳಿಂದ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಹಳಷ್ಟು ಅಪಘಾತ ಪ್ರಕರಣಗಳಲ್ಲಿ ಪಾದಚಾರಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ಪಾದಚಾರಿ ಪಥ ಜನರ ಮೂಲಭೂತ ಹಕ್ಕು ಎಂದು ತಿಳಿಸಿದೆ. ಪಾದಚಾರಿ ಪಥದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದು ಆಯಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ತಕ್ಷಣ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

.jpeg)