ಬಿಜೆಪಿ ಓಬಿಸಿ ಮೋರ್ಚಾ ಪದಗ್ರಹಣ, ಕಾರ್ಯಕಾರಿಣಿ ಸಭೆ : ಪಕ್ಷ ಬಲವರ್ಧನೆಗೆ ಶ್ರಮಿಸಿ

ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಮನವಿ 


ಭದ್ರಾವತಿಯಲ್ಲಿ ನಗರ ಹಾಗೂ ಗ್ರಾಮಾಂತರ ಬಿಜೆಪಿ ಮಂಡಲಗಳ ಓಬಿಸಿ ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕಾರಿಣಿ ಸಭೆ ಶುಕ್ರವಾರ ನಡೆಯಿತು. 
    ಭದ್ರಾವತಿ: ನಗರ ಮತ್ತು ಗ್ರಾಮಾಂತರ ಓಬಿಸಿ ಮೋರ್ಚಾಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ ಮನವಿ ಮಾಡಿದರು. 
    ಅವರು ಶುಕ್ರವಾರ ನಗರ ಹಾಗೂ ಗ್ರಾಮಾಂತರ ಮಂಡಲಗಳ ಓಬಿಸಿ ಮೋರ್ಚಾ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 
    ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದು, ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ವಿಶೇಷವಾಗಿ ದಲಿತ ಹಾಗು ಹಿಂದುಳಿದ ವರ್ಗಗಳಿಗಾಗಿ ಜಾರಿಗೊಳಿಸಿದೆ. ಇವುಗಳ ಸದ್ಬಳಕೆ ಕುರಿತು ಜನರಿಗೆ ಅರಿವು ಮೂಡಿಸುವ ಜೊತೆಗೆ ಪಕ್ಷ ಸಂಘಟನೆಗೆ ಕೈಜೋಡಿಸಬೇಕೆಂದರು. 
    ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಮಾತನಾಡಿ, ಬಿಜೆಪಿ ಪಕ್ಷ "ಸರ್ವವ್ಯಾಪಿ-ಸರ್ವಸ್ಪರ್ಶಿ" ತತ್ವದಡಿ ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯನ್ನು ಬಲಪಡಿಸುತ್ತಿದೆ. ಜಿಲ್ಲೆಯಿಂದ ದೊರೆಯುವ ಮಾರ್ಗದರ್ಶನದಂತೆ ಓಬಿಸಿ ಮೋರ್ಚಾ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಪದಾಧಿಕಾರಿಯೂ ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಬಹುದು ಎಂದರು. 
ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ  ಕೆ.ಎನ್ ಸುಧಾಕರ್‌ರವರ ಮಾರ್ಗದರ್ಶನದಲ್ಲಿ ನೂತನವಾಗಿ ಜವಾಬ್ದಾರಿ ಸ್ವೀಕರಿಸಿದ ನಗರ ಓಬಿಸಿ ಮೋರ್ಚಾ ಅಧ್ಯಕ್ಷ ರಾಜಶೇಖರ್ ಉಪ್ಪಾರ್ ಹಾಗೂ ಗ್ರಾಮಾಂತರ ಓಬಿಸಿ ಮೋರ್ಚಾ ಅಧ್ಯಕ್ಷ ತೀರ್ಥಪ್ಪರವರ ನೇತೃತ್ವದಲ್ಲಿ ಪದಗ್ರಹಣ ನೆರವೇರಿತು.
    ನಗರ ಮಂಡಲ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್ ಆಚಾರ್ ಹಾಗೂ ಪಚ್ಚಿಯಪ್ಪ, ಗ್ರಾಮಾಂತರ ಮಂಡಲ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾಗಿ ಮಂಜುನಾಥ್ ಮತ್ತು ಶ್ರೀನಿವಾಸ್ ಜವಾಬ್ದಾರಿ ಸ್ವೀಕರಿಸಿದರು.
    ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ಕೆ.ಎನ್. ಸುಧಾಕರ್, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ರಘುರಾವ್, ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಮೊಸರಹಳ್ಳಿ ಅಣ್ಣಪ್ಪ, ಹನುಮಂತ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸರಸ್ವತಿ, ಬಿಎಲ್‌ಎ-೧ ಸುರೇಶಪ್ಪ, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಭಗಣಿಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್, ಜಿಲ್ಲಾ ಕಾರ್ಯದರ್ಶಿ ಮಮತಾ ರೆಡ್ಡಿ, ಜಿಲ್ಲಾ ಓಬಿಸಿ ಕಾರ್ಯದರ್ಶಿ ಲೋಕೇಶ್, ನಗರ ಓಬಿಸಿ ಪ್ರಭಾರಿ ರೇಖಾ ಬೋಸ್ಲೆ, ಮಂಡಲಗಳ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.