ಹುತ್ತಾಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಅನುಮತಿ



ಭದ್ರಾವತಿ ಹುತ್ತಾಕಾಲೋನಿ ಸರ್ಕಾರಿ ಪ್ರೌಢಶಾಲೆ. 
    ಭದ್ರಾವತಿ : ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೩೩ರ ಹುತ್ತಾಕಾಲೋನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. 
      ಈ ಶಾಲೆ ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕವಾಗಿ ಗಣನೀಯ ಸಾಧನೆ ಮಾಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಸಂಬಂಧ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೆಲವು ಷರತ್ತುಗಳೊಂದಿಗೆ ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮ ವಿಭಾಗಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. 
    ಪ್ರಸಕ್ತ ಸಾಲಿನಲ್ಲಿ ಕನ್ನಡ ಮಾಧ್ಯಮ ವಿಭಾಗಗಳ ಜೊತೆಗೆ ೮, ೯ ಮತ್ತು ೧೦ನೇ ತರಗತಿಗಳಲ್ಲಿ ತಲಾ ಒಂದೊಂದು ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ಅನುಮತಿಸಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಆಯುಕ್ತರು ಜ್ಞಾಪನ ಪತ್ರ ಹೊರಡಿಸಿದ್ದಾರೆ. 
ಶಾಲೆಯ ಮುಖ್ಯ ಶಿಕ್ಷಕ ಪರಶುರಾಮರಾವ್ ಪತ್ರಿಕೆಗೆ ಪ್ರತಿಕ್ರಿಯಿಸಿ, ಶಾಲೆಯ ದಾಖಲಾತಿಯಲ್ಲಿ ಸುಧಾರಣೆ ಕಾಯ್ದುಕೊಳ್ಳಲಾಗಿದೆ. ಕಳೆದ ೨ ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ `ಎ' ಗ್ರೇಡ್ ಮೌಲ್ಯಂಕನದೊಂದಿಗೆ ಶೇ.೧೦೦ರಷ್ಟು ಫಲಿಶಾಂಶ ಪಡೆದಿದೆ. ಪರಿಣಿತ ಶಿಕ್ಷಕ ವರ್ಗ, ಮೂಲ ಸೌಕರ್ಯಗಳನ್ನು ಶಾಲೆ ಒಳಗೊಂಡಿದೆ. ಪ್ರಸಕ್ತ ಸಾಲಿನಿಂದ ಆಂಗ್ಲ ಮಾಧ್ಯಮ ವಿಭಾಗಗಳನ್ನು ಆರಂಭಿಸಲು ಅನುಮತಿಸಿರುವುದು ಸಂಭ್ರಮವನ್ನುಂಟುಮಾಡಿದೆ. ಈ ನಿಟ್ಟಿನಲ್ಲಿ ಸಹಕರಿಸಿದ ಜನಪ್ರತಿನಿಧಿಗಳಿಗೆ, ಇಲಾಖೆ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಕೈಜೋಡಿಸುವಂತೆ ಮನವಿ ಮಾಡಿದ್ದಾರೆ.