ನಗರಸಭೆ ಪೌರಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನ ನೀಡಿ

ದಲಿತ ಮುಖಂಡರ ನೇತೃತ್ವದಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷ, ಪೌರಾಯುಕ್ತರಿಗೆ ಮನವಿ 



ರಾಜ್ಯ ಸರ್ಕಾರ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಏಕ ರೂಪ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಹೊರಡಿಸಿರುವ ಅಧಿಸೂಚನೆ ಅನ್ವಯ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಸ್ವಚ್ಚತಾ ಕಾರ್ಮಿಕರು, ಗುತ್ತಿಗೆ ಹಾಗು ಹೊರ ಗುತ್ತಿಗೆ ಕಾರ್ಮಿಕರು, ನೇರಪಾವತಿ ಸೌಲಭ್ಯ ಪಡೆಯುತ್ತಿರುವ ಕಾರ್ಮಿಕರು, ಚಾಲಕರು, ಸಹಾಯಕರು ಹಾಗು ಕ್ಲೀನರ್‌ಗಳಿಗೆ ಕನಿಷ್ಠ ವೇತನ ಪಾವತಿಸುವಂತೆ ಆಗ್ರಹಿಸಿ ಸೋಮವಾರ ದಲಿತ ಮುಖಂಡರ ನೇತೃತ್ವದಲ್ಲಿ ಭದ್ರಾವತಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಹಾಗು ಉಪಾಧ್ಯಕ್ಷ ಬಷೀರ್ ಅಹಮದ್ ಮತ್ತು ಪೌರಾಯುಕ್ತ ಕೆ.ಎನ್ ಹೇಮಂತ್ ಅವರಿಗೆ ಮನವಿ ಸಲ್ಲಿಸಲಾಯಿತು. 
    ಭದ್ರಾವತಿ : ರಾಜ್ಯ ಸರ್ಕಾರ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಏಕ ರೂಪ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಿ ಹೊರಡಿಸಿರುವ ಅಧಿಸೂಚನೆ ಅನ್ವಯ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಸ್ವಚ್ಚತಾ ಕಾರ್ಮಿಕರು, ಗುತ್ತಿಗೆ ಹಾಗು ಹೊರ ಗುತ್ತಿಗೆ ಕಾರ್ಮಿಕರು, ನೇರಪಾವತಿ ಸೌಲಭ್ಯ ಪಡೆಯುತ್ತಿರುವ ಕಾರ್ಮಿಕರು, ಚಾಲಕರು, ಸಹಾಯಕರು ಹಾಗು ಕ್ಲೀನರ್‌ಗಳಿಗೆ ಕನಿಷ್ಠ ವೇತನ ಪಾವತಿಸುವಂತೆ ಆಗ್ರಹಿಸಿ ಸೋಮವಾರ ದಲಿತ ಮುಖಂಡರ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಹಾಗು ಉಪಾಧ್ಯಕ್ಷ ಬಷೀರ್ ಅಹಮದ್ ಮತ್ತು ಪೌರಾಯುಕ್ತ ಕೆ.ಎನ್ ಹೇಮಂತ್ ಅವರಿಗೆ ಮನವಿ ಸಲ್ಲಿಸಲಾಯಿತು. 
    ರಾಜ್ಯ ಸರ್ಕಾರ ಮೇ.೨೨, ೨೦೨೬ರಂದು ಹೊರಡಿಸಿರುವ ಅಧಿಸೂಚನೆ ಅನ್ವಯ ಪರಿಷ್ಕೃತ ಕನಿಷ್ಠ ವೇತನ ದರಗಳನ್ನು ಅಂತಿಮಗೊಳಿಸಿದ್ದು, ಉಪವಿಭಾಗಾಧಿಕಾರಿ ಹಾಗು ಜಿಲ್ಲಾ ಕಾರ್ಮಿಕ ಅಧಿಕಾರಿ ಸರ್ಕಾರದ ಅಧಿಸೂಚನೆಯಂತೆ ಜಿಲ್ಲಾಮಟ್ಟದ ಹಾಗು ತಾಲೂಕು ಮಟ್ಟದ ಅಧಿಕಾರಿಗಳಿಗೆ ಜೂ.೬, ೨೦೨೬ರಂದು ಸುತ್ತೋಲೆ ಹೊರಡಿಸಿ ಸರ್ಕಾರ ನಿಗದಿಪಡಿಸಿರುವ ಪರಿಷ್ಕೃತ ಕನಿಷ್ಠ ವೇತನ ನೀಡುವಂತೆ ಸೂಚಿಸಿರುತ್ತಾರೆ. ಈ ಹಿನ್ನಲೆಯಲ್ಲಿ ನಗರದ ಕಾರ್ಮಿಕ ನಿರೀಕ್ಷಕರು ನಗರಸಭೆಗೆ ಪರಿಷ್ಕೃತ ಕನಿಷ್ಠ ವೇತನ ದರಗಳನ್ನು ನಿಗದಿಪಡಿಸಿ ಜೂ.೨೦ ರಂದು ಸಲ್ಲಿಸಿರುತ್ತಾರೆ. ಆದರೆ ನಗರಸಭೆ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತ ಮುಖಂಡರು ದೂರಿದರು. 
    ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾ ಹಾಗು ತಾಲೂಕು ಕೇಂದ್ರಗಳಲ್ಲಿ ಪರಿಷ್ಕೃತ ಕನಿಷ್ಠ ವೇತನ ಪಾವತಿಸಲಾಗುತ್ತಿದೆ.  ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು, ಸ್ವಚ್ಚತಾ ಕಾರ್ಮಿಕರು, ಗುತ್ತಿಗೆ ಹಾಗು ಹೊರ ಗುತ್ತಿಗೆ ಕಾರ್ಮಿಕರು, ನೇರಪಾವತಿ ಸೌಲಭ್ಯ ಪಡೆಯುತ್ತಿರುವ ಕಾರ್ಮಿಕರು, ಚಾಲಕರು, ಸಹಾಯಕರು ಹಾಗು ಕ್ಲೀನರ್‌ಗಳಿಗೆ ಪರಿಷ್ಕೃತ ಕನಿಷ್ಠ ವೇತನ ಪಾವತಿಸುವಂತೆ ಮನವಿ ಮಾಡಿದರು. 
    ದಲಿತ ಮುಖಂಡರಾದ ಸತ್ಯ ಭದ್ರಾವತಿ, ಚಿನ್ನಯ್ಯ, ಈಶ್ವರಪ್ಪ, ಏಳುಮಲೈ, ರಂಗನಾಥ್, ಮಣಿ ಜಿಂಕ್‌ಲೈನ್, ಆರ್. ಸಂದೀಪ್ ಮತ್ತು ಕಾಣಿಕ್ಯರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.