ಹಿಂದೂ ಧರ್ಮ ಸಂಘಟಿಸುವ ಕಾರ್ಯದಲ್ಲಿ ೧ ಶತಮಾನ ಪೂರೈಸಿದ ಆರ್‌ಎಸ್‌ಎಸ್
ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಮುಖ ನಾಗರೀಕ ಗೋಷ್ಠಿಯಲ್ಲಿ ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ ಸಹ ವ್ಯವಸ್ಥಾ ಪ್ರಮುಖರಾದ ಉಮೇಶ್ ಮಾತನಾಡಿದರು.
ಭದ್ರಾವತಿ: ರಾಷ್ಟ್ರೀಯ ಸ್ವಯಂ ಸೇವಕ(ಆರ್‌ಎಸ್‌ಎಸ್) ಸಂಘ ಕಳೆದ ಒಂದು ಶತಮಾನದಿಂದ ಪವಿತ್ರವಾದ ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಹ ವ್ಯವಸ್ಥಾ ಪ್ರಮುಖರಾದ ಉಮೇಶ್ ಹೇಳಿದರು.
ಅವರು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಮುಖ ನಾಗರೀಕ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಹಿಂದೂ ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ಆರ್‌ಎಸ್‌ಎಸ್ ನಿರಂತರವಾಗಿ ತೊಡಗಿಸಿಕೊಂಡಿದೆ. ಈ ಕಾರ್ಯದಲ್ಲಿ ಸಮಾಜವನ್ನು ಹೊರತುಪಡಿಸಿ ಸಂಘ ಹಾಗು ಸಂಘದ ಕಾರ್ಯ ಚಟುವಟಿಕೆಗಳು ಇಲ್ಲ. ಇದರಲ್ಲಿ ಸಮಾಜದ ಎಲ್ಲರನ್ನೂ ಒಳಗೊಳ್ಳುವಂತೆ ಮಾಡುತ್ತಿದೆ ಎಂದರು.
ಆರ್‌ಎಸ್‌ಎಸ್ ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ಒಂದು ಕಡೆ ಬಲಿಷ್ಠ ಭಾರತ ನಿರ್ಮಿಸುವ ಹಿಂದೂಗಳ ಸಂಘಟನೆಯನ್ನು ಕಟ್ಟುವ ಹಾಗು ಸ್ವಾತಂತ್ರ್ಯದ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಿಕೆಯ ಯೋಜನೆ ರೂಪಿಸಿತು. ಬ್ರಿಟಿಷರು ನಿರಂತರವಾಗಿ ದೇಶದ ಇತಿಹಾಸ ತಿರುಚುವ, ಜನರನ್ನು ಒಡೆಯುವ ಕಾರ್ಯವನ್ನು ಮಾಡಿದರು. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ಬ್ರಿಟಿಷರು ಸಿಪಾಯಿ ದಂಗೆ ಎಂದರು. ಇನ್ನೊಂದು ಕಡೆ ಲಾರ್ಡ್ ಮೆಕಾಲೆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳುಗೆಡುವ ಸಂಚನ್ನು ರೂಪಿಸಿದ. ಸ್ವಾತಂತ್ರ್ಯದ ದಿಕ್ಕು ತಪ್ಪಿಸುವ ಕಾರ್ಯವನ್ನು ಮಾಡಿದರು. ಈ ಸಂಚನ್ನು ದೇಶದ ಜನರಿಗೆ ತಿಳಿಸುವ, ನೈಜ ಇತಿಹಾಸವನ್ನು ಜನರ ಮುಂದಿಡುವ ಕಾರ್ಯ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದರು.
ಲಾಲ್, ಪಾಲ್, ಬಾಲ್ ರವರುಗಳು ಬ್ರಿಟಿಷರ ಸಾಮ್ರಾಜ್ಯವನ್ನು ನಡುಗಿಸಿದ ಕ್ರಾಂತಿಕಾರಿ ಹೋರಾಟಗಾರರು. ಬಾಲಗಂಗಾಧರ ತಿಲಕ್‌ರವರು ಶಿವಾಜಿ ಜಯಂತಿ ಹಾಗು ಗಣಪತಿ ಉತ್ಸವ ಸಾರ್ವಜನಿಕ ಉತ್ಸವವನ್ನಾಗಿಸುವ ಮೂಲಕ ಸ್ವಾತಂತ್ರ್ಯದ ಹೋರಾಟಕ್ಕೆ ಶಕ್ತಿಯನ್ನು ತುಂಬಿದರು. ಇದರ ಪರಿಣಾಮ ದೇಶದಾದ್ಯಂತ ಸಾರ್ವಜನಿಕರು ಈ ಉತ್ಸವದಲ್ಲಿ ಭಾಗಗಿಗಳಾದರು. ಇದು ಬ್ರಿಟಿಷರಿಗೆ ಹೊಸ ತಲೆ ನೋವು ತಂದಿತು. ಟರ್ಕಿ ದೇಶದ ಖಿಲಾಫತನ್ನು ಪದಚ್ಯುತಗೊಳಿಸಿದ್ದಕ್ಕೆ ಇಲ್ಲಿ ಖಿಲಾಫತ್ ಹೋರಾಟ ಮಾಡುವ ಪರಿಸ್ಥಿತಿ ಉಂಟಾಯಿತು. ಆ ಮೂಲಕ ಮುಸ್ಲಿಮರಿಗೆ ವಿಶೇಷ ಔದಾರ್ಯ, ಗೌರವಿಸುವ ವಾತಾವರಣ ನಿರ್ಮಾಣವಾಯಿತು. ಇದರ ಪರಿಣಾಮ ಮುಸ್ಲಿಂ ಲೀಗ್ ಕಾಂಗ್ರೇಸನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿತು. ಸ್ವಾತಂತ್ರ್ಯದ ಹೋರಾಟವನ್ನು ಹತ್ತಿಕ್ಕಿಕ್ಕುವ ಪ್ರಯತ್ನ ಮಾಡಿದರು. ಆಂಧ್ರಪ್ರದೇಶದ ಕಾಕಿನಾಡ ಅಧಿವೇಶನದಲ್ಲಿ ವಂದೇ ಮಾತರಂ ಹಾಡಿದ್ದಕ್ಕೆ ಸಭೆಯಿಂದ ಬಹಿಷ್ಕರಿಸಿದರು. ಭಗವಾಧ್ವಜ ರಾಷ್ಟ್ರ ಧ್ವಜವಾಗುವುದರ ಬದಲಿಗೆ ತ್ರೀವರ್ಣಧ್ವಜ ರಾಷ್ಟ್ರ ಧ್ವಜವಾಯಿತು. ಹಿಂದೂಗಳ ನರಮೇಧ ನಡೆದ ಮೂಪ್ಲಾ ಹತ್ಯಾಕಾಂಡದ ನೈಜ ಇತಿಹಾಸವನ್ನು ಮರೆಮಾಚಲಾಯಿತು. ಇಂತಹ ಹಲವಾರು ಸಂಗತಿಗಳನ್ನು ದೇಶದ ಜನರಿಗೆ ತಿಳಿಸುವ ಕಾರ್ಯವನ್ನು ಆರ್‌ಎಸ್‌ಎಸ್ ಮಾಡುತ್ತಿದೆ ಎಂದರು.
ಇಷ್ಟಾದರೂ ಇಂದಿಗೂ ಬ್ರಿಟಿಷರು ನೀಡಿದ ಪೆಟ್ಟು, ಒಡೆದು ಆಳುವ ನೀತಿಯ ಫಲವನ್ನು ಅನುಭವಿಸಬೇಕಿದೆ. ಜನರ ಮನಸ್ಸನ್ನು ಹಾಳು ಮಾಡಿದರು. ಸಂಸ್ಕೃತಿಯನ್ನು ಹಾಳುಗೆಡವಿದರು. ಇನ್ನಾದರೂ ನಾವು ನಮ್ಮ ಇತಿಹಾಸವನ್ನು, ನಮ್ಮ ಆಚಾರ ವಿಚಾರ, ಸಾಂಸ್ಕೃತಿಕ ಸಂಗತಿಗಳನ್ನು ಅರಿಯುವ ಪ್ರಯತ್ನ ಮಾಡದಿದ್ದರೆ ಮುಂದೊಂದು ದಿನ ಇದಕ್ಕೆ ಬಾರಿ ಬೆಲೆ ತೆತ್ತು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ರಾಷ್ಟ್ರ ಧರ್ಮ ಉಳಿಸಲೇಬೇಕಿದೆ. ಅದು ಮಾನವ ಧರ್ಮವಾಗಿದ್ದು, ಯಾರಿಗೂ ನೋವನ್ನು ಉಂಟು ಮಾಡಬಾರದು ಒಳ್ಳೆಯದನ್ನು ಮಾಡಬೇಕು ಎಂಬ ಭಾವನೆಯೆ ಧರ್ಮ. ಧರ್ಮ ಎಂಬುದು ಪೂಜಾ ಪಧ್ಧತಿಯಲ್ಲ. ಅದೊಂದು ಸಾಮಾಜಿಕ ನಡಾವಳಿಕೆ ಆಗಿದೆ ಎಂದರು.
ಸಭಿಕರಿಂದ ಸಂವಾದ ಕಾರ್ಯಕ್ರಮ ನಡೆಯಿತು. ಮಧುಕರ್ ಮತ್ತು ಡಿ.ಎ.ರಂಗನಾಥ್ ಉಪಸ್ಥಿತರಿದ್ದರು.
