ಧಾರ್ಮಿಕ ಸಾಮರಸ್ಯದೊಂದಿಗೆ ಸಂಸ್ಥಾಪನಾ ದಿನ ಆಚರಿಸಿದ ಸಿಆರ್‌ಪಿಎಫ್



ಭದ್ರಾವತಿ ನಗರದ ಮಿಲ್ಟ್ರಿಕ್ಯಾಂಪ್ ೯೭ ಆರ್‌ಎಎಫ್ ಬೆಟಾಲಿಯನ್‌ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ತನ್ನ ೮೮ನೇ ಸ್ಥಾಪನಾ ದಿನವನ್ನು ದೇಶಭಕ್ತಿಯ ಉತ್ಸಾಹ ಮತ್ತು ಕೋಮು ಸೌಹಾರ್ದತೆಯೊಂದಿಗೆ ಆಚರಿಸಿತು.
    ಭದ್ರಾವತಿ: ನಗರದ ಮಿಲ್ಟ್ರಿಕ್ಯಾಂಪ್ ೯೭ ಆರ್‌ಎಎಫ್ ಬೆಟಾಲಿಯನ್‌ನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ತನ್ನ ೮೮ನೇ ಸ್ಥಾಪನಾ ದಿನವನ್ನು ದೇಶಭಕ್ತಿಯ ಉತ್ಸಾಹ ಮತ್ತು ಕೋಮು ಸೌಹಾರ್ದತೆಯೊಂದಿಗೆ ಆಚರಿಸಿತು. 
    ರಾಷ್ಟ್ರೀಯ ಏಕತೆ ಮತ್ತು ಜಾತ್ಯಾತೀತ ಮೌಲ್ಯಗಳಿಗೆ ಪಡೆಯ ಬದ್ಧತೆಯನ್ನು ಎತ್ತಿ ತೋರಿಸಲು ಪ್ರಮುಖ ಧಾರ್ಮಿಕ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆರಂಭದಲ್ಲಿ ರಾಷ್ಟ್ರದ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಧೈರ್ಯಶಾಲಿ ಸಿಬ್ಬಂದಿಗೆ ಗೌರವ ಸಲ್ಲಿಸಲು ಹುತಾತ್ಮರ ಸ್ಮಾರಕದಲ್ಲಿ ಮಾಲಾರ್ಪಣೆ ಮಾಡಲಾಯಿತು. 
    ೯೭ ಆರ್‌ಎಎಫ್ ಬೆಟಾಲಿಯನ್ ಪಿಎಂಜಿ ಕಮಾಂಡೆಂಟ್ ದೇವಂದರ್ ಸಿಂಗ್ ಕಸ್ವಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಸಿಆರ್‌ಪಿಎಫ್ ತನ್ನದೇ ಆದ ಅದ್ಭುತ ಇತಿಹಾಸ ಹೊಂದಿದೆ. ಜುಲೈ ೨೭, ೧೯೩೯ರಂದು ಸ್ಥಾಪನೆಯಾದಾಗಿನಿಂದ ಆಂತರಿಕ ಭದ್ರತೆ, ವಿಪತ್ತು ಪರಿಹಾರ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅದರ ಪಾತ್ರ ಹೆಚ್ಚಿದ್ದಾಗಿದೆ ಎಂದರು. 
ಸಿಆರ್‌ಪಿಎಫ್ ಯಾವಾಗಲೂ "ಸೇವೆ ಮತ್ತು ನಿಷ್ಠೆ"ಗಾಗಿ ನಿಂತಿದೆ ಮತ್ತು ವೈವಿಧ್ಯತೆಯಲ್ಲಿ ಏಕತೆಯ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವುದನ್ನು ಮುಂದುವರೆಸಿದೆ ಎಂದರು. 
ವಿವಿಧ ಧಾರ್ಮಿಕ ಮುಖಂಡರಾದ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಫ್ರಾನ್ಸಿಸ್, ಅಂತೋಣಿ ವಿಲ್ಸನ್, ಅಮೀರ್‌ಜಾನ್ ಮತ್ತು ರಮಾಕಾಂತರವರು ಸೈನಿಕರನ್ನು ಅಭಿನಂದಿಸಿ ಮಾತನಾಡಿ,  ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳುವ ಜೊತೆಗೆ ದೇಶವನ್ನು ರಕ್ಷಿಸುವಲ್ಲಿ ಸಿಆರ್‌ಪಿಎಫ್ ಪಾತ್ರವನ್ನು ಶ್ಲಾಘಿಸಿದರು. ಅಲ್ಲದೆ ಸೈನಿಕರು ಮತ್ತು ಅವರ ಕುಟುಂಬಗಳ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು. 
ಸಿಆರ್‌ಪಿಎಫ್ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಜವಾನರ ಕುಟುಂಬಗಳು, ನಾಗರಿಕ ಗಣ್ಯರು ಮತ್ತು ಸ್ಥಳೀಯ ಆಡಳಿತದ ಪ್ರತಿನಿಧಿಗಳು ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.