ಆ.೨ರಂದು `ಭೂಮಿಕಾ' ರಜತ ಮಹೋತ್ಸವ ಸಮಾರಂಭ : ಡಾ. ಕೃಷ್ಣ ಎಸ್. ಭಟ್
ಭದ್ರಾವತಿ: ಕನ್ನಡ ನಾಡು, ನುಡಿ, ಸಂಸ್ಕೃತಿಯ ಸೇವೆಗೆಂದು ಸಹಮನಸ್ಕರಿಂದ ೨೬ನೇ ಜನವರಿ ೨೦೦೨ ರಂದು ಪ್ರಾರಂಭವಾದ ಭೂಮಿಕಾ ವೇದಿಕೆ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು, ಆ.೨ರ ಭಾನುವಾರ ವೇದಿಕೆಯ ರಜತ ಮಹೋತ್ಸವ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಅಧ್ಯಕ್ಷ ಡಾ. ಕೃಷ್ಣ ಎಸ್ ಭಟ್ ತಿಳಿಸಿದರು.
ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೇದಿಕೆ ೨೫ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಅವಿಸ್ಮರಣೀಯ ಬೆಳವಣಿಗೆಯಾಗಿದೆ. ಅರ್ಥಪೂರ್ಣ, ಸಾರ್ಥಕ ನಿರಂತರ ಕಾರ್ಯಕ್ರಮಗಳಿಂದಾಗಿ ೨೫ ವರ್ಷಗಳು ಕಳೆದು ಹೋಗಿರುವುದು ಅರಿವಿಗೆ ಬರುತ್ತಿಲ್ಲ. ಹೇಗೆ ಹಕ್ಕಿಯಂತೆ ಹಾರಿ ಹೋಯಿತು ಎಂಬುದು ತಿಳಿಯಲೇ ಇಲ್ಲ ಎಂದರು.
ಕನ್ನಡ ಸಾಹಿತಿಗಳ ಸಂಸ್ಮರಣೆ, ರಸಪ್ರಶ್ನೆ, ಬೇಸಿಗೆ ಶಿಬಿರ, ದೇಶಭಕ್ತಿ ಗೀತೆ, ಕಾವ್ಯ ಗಾಯನ, ಮಹಿಳಾ ದಿನಾಚರಣೆ, ಶಿಕ್ಷಕರ ದಿನಾಚರಣೆ, ಪತ್ರಿಕಾ ದಿನಾಚರಣೆ, ಸಾಹಿತ್ಯ ಸಂಸ್ಕೃತಿ, ನೃತ್ಯ, ಜಾನಪದ, ಯಕ್ಷಗಾನ ಮುಂತಾದ ಸುಮಾರು ೧೫೦ ವಿಭಿನ್ನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸೇರಿದಂತೆ ವೇದಿಕೆ ಎಲ್ಲಾ ಸದಸ್ಯರ ಶ್ರಮ ಹೆಚ್ಚಿನದ್ದಾಗಿದೆ ಎಂದರು.
೨೫ ವರ್ಷಗಳ ಕಾಲಾವಧಿಯಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ಬದುಕಿನ ಎಲ್ಲಾ ಮುಖಗಳನ್ನು ಸೊಗಸಾಗಿ, ಸಶಕ್ತವಾಗಿ, ಅರ್ಥಪೂರ್ಣವಾಗಿ ಅಭಿವೃತ್ತಿಗೊಳಿಸಿದ ಕಾರ್ಯಕ್ರಮಗಳಿಗೆ ಸ್ಪಂದಿಸಿ ಬಂದ ಅಸಂಖ್ಯಾತ ಕವಿ ಹಾಗೂ ಸಾಧಕರ ಪ್ರೋತ್ಸಾಹ, ಅವರ ಸಿಹಿನುಡಿ, ಶುಭ ಸಂದೇಶಗಳು ನಮ್ಮ ಕಾರ್ಯಕಾರಿ ಸಮಿತಿಗೆ ಹೊಸ ಚೈತನ್ಯವನ್ನು ನೀಡಿದೆ. ಭೂಮಿಕಾ ನಡೆಸಿದ ೨೫ ವರ್ಷಗಳ ನಿರಂತರ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಕಲಾಶ್ರೀ ದಿವಂಗತ ಎಸ್. ಶಾಮಮೂರ್ತಿ, ಸಾಹಿತಿಗಳಾದ ಡಾ. ಎಸ್ ವೇಣುಗೋಪಾಲ್, ಕೃಷ್ಣಪ್ಪ. ಡಾ. ಸುಮತಿಂದ್ರ ನಾಡಿಗ್, ಬಿ.ಆರ್. ಲಕ್ಷ್ಮಣ್ ರಾವ್, ಡಾ. ಪದ್ಮಪ್ರಸಾದ್, ಡಾ. ಎಸ್.ಆರ್ ವಿಜಯಶಂಕರ್ ಬೆಂಗಳೂರು, ಡಾ. ಜಯಪ್ರಕಾಶ್ ಗೌಡ ಮಂಡ್ಯ, ಡಾ. ಕುಂ. ವೀರಭದ್ರಪ್ಪ, ಡಾ. ಸತ್ಯನಾರಾಯಣ ಚಿಕ್ಕಮಗಳೂರು, ಡಾ. ವಿಜಯದೇವಿ, ಡಾ. ಕಲೀಮುಲ್ಲಾ, ಡಾ. ತುರುವನೂರು ಮಲ್ಲಿಕಾರ್ಜುನ, ಎಂ.ಎಸ್ ಸುಂದರ್‌ರಾಜ್, ವಿಜಯ ಶ್ರೀಧರ್, ಚಲನಚಿತ್ರ ನಟರಾದ ರಮೇಶ್ ಭಟ್, ಸುಚೇಂದ್ರ ಪ್ರಸಾದ್, ಬಾಬು ಹಿರಿಯಣ್ಣಯ್ಯ, ಎಂ.ಡಿ ಕೌಶಿಕ್, ಪತ್ರಕರ್ತರಾದ ವಿಶ್ವೇಶ್ವರ ಭಟ್, ಕೃಷ್ಣಮೂರ್ತಿ ಹೆಬ್ಬಾರ್, ಎಂ. ಕಣ್ಣಪ್ಪ, ಖ್ಯಾತ ಮನೋವೈದ್ಯರಾದ ಪದ್ಮಶ್ರೀ ಡಾ. ಸಿ.ಆರ್ ಚಂದ್ರಶೇಖರ್, ಡಾ. ಐಶ್ವರ್ಯ, ಡಾ. ನಾ. ಸೋಮೇಶ್ವರ ಹಾಗೂ ಹಾಸ್ಯ ಸಾಹಿತಿಗಳಾದ ಡಾ. ಕೆ.ಪಿ ಪುತ್ತೂರಾಯ, ಎಂ.ಎಸ್. ನರಸಿಂಹಮೂರ್ತಿ, ವೈ.ಎನ್ ಗುಂಡೂರಾವ್, ದುಂಡಿರಾಜ್, ರಾಮನಾಥ ಎನ್ ಬೆಂಗಳೂರು, ಇಂಧುಮತಿ ಸಾಲಿವ, ಭುವನೇಶ್ವರಿ ಹೆಗಡೆ, ಜಾನಪದ ತಜ್ಞ ಡಾ. ಬಸವರಾಜ ನೆಲ್ಲಿಸರ, ಯಕ್ಷಗಾನ ಕಲಾವಿದರಾದ ಪದ್ಮಶ್ರೀ ಡಾ.ಚಿಟ್ಟಾಣಿ ರಾಮಚಂದ್ರ ಹೆಗಡೆ, ಕಲಾವಿದರಾದ ಬಿ.ಎಸ್ ಭಗವಾನ್ ಪಾಂಡವಪುರ, ಚಂದ್ರಶೇಖರ ಪಾವಗಡ, ಲಕ್ಷ್ಮೀಕಾಂತ ಬೋರತ್, ಭರತನಾಟ್ಯ ಕಲಾವಿದರಾದ ಡಾ ಕೆ.ಎಸ್. ಚೈತ್ರ, ಡಾ. ಕೆ.ಎಸ್. ಪವಿತ್ರ, ಸಂಗೀತಗಾರ ಜಿ.ಆರ್ ಭಟ್ ಹಾಗೂ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಸೇರಿದಂತೆ ಇನ್ನೂ ಮುಂತಾದ ಕವಿಗಳು ಹಾಗೂ ಕಲಾವಿದರು ಭಾಗವಹಿಸಿರುತ್ತಾರೆ. ೨೦೧೨ರಲ್ಲಿ ಭೂಮಿಕಾ ದಶಮಾನೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು. ಇದೀಗ ರಜತ ಮಹೋತ್ಸವ ಆಚರಿಸಲಾಗುತ್ತಿದ್ದು, ಇದೊಂದು ಅವಿಸ್ಮರಣೀಯ ಘಳಿಗೆಯಾಗಿದೆ ಎಂದರು.
ಆ.೨ರ ಸಂಜೆ ೬ ಗಂಟೆಗೆ ರಜತ ಮಹೋತ್ಸವ ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದು, ನಿಟ್ಟೂರಿನ ಸಾಹಿತಿ, ಬಹುಶ್ರುತ ವಿದ್ವಾಂಸ ಡಾ. ಪಿ. ಶಾಂತರಾಮ್ ಪ್ರಭು, ಉಡುಪಿ ಹಾಸ್ಯ ಸಾಹಿತಿ ಯು. ಸಂದ್ಯಾಶೆಣೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮೊದಲು ಸಂಜೆ ೪.೩೦ಕ್ಕೆ ಜಾನಪದ ನೃತ್ಯ, ಕನ್ನಡ ಸಮೂಹ ಗಾಯನ, ಭರತನಾಟ್ಯ ರೂಪಕ, ಸಮೂಹ ನೃತ್ಯ, ಜಾನಪದ ಹಾಡು ಮತ್ತು ನೃತ್ಯ ರೂಪಕ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಸಿ.ಎಲ್ ಮುನಿರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ. ರಾಮಾಚಾರ್, ಎಚ್. ಮಲ್ಲಿಕಾರ್ಜುನ, ಶಾರದ ಶ್ರೀನಿವಾಸ್ ಮತ್ತು ಕೆ. ಆನಂದ್ ಉಪಸ್ಥಿತರಿದ್ದರು.
.jpg)