ಜು.೩೦ರಂದು ಅರಿವಿನ ರಥ, ಬೈಕ್ ಜಾಥಾ
ಭದ್ರಾವತಿ : ಅಂತರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ನಗರದ ತಾಲೂಕು ಪಂಚಾಯಿತಿ ಕಛೇರಿ ಸಮೀಪದ ನಿರ್ಮಲ ಆಸ್ಪತ್ರೆಯ ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಜು.೩೦ರಂದು ಅರಿವಿನ ರಥ ಮತ್ತು ಬೈಕ್ ಜಾಥಾ ಹಮ್ಮಿಕೊಳ್ಳಲಾಗಿದೆ.
ರಂಗಪ್ಪ ವೃತ್ತದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಮಹಿಳೆಯರ ಮೇಲಿನ ಅತ್ಯಾಚಾರಗಳು, ದೌರ್ಜನ್ಯಗಳನ್ನು ವಿರೋಧಿಸಿ ಅರಿವು ಮೂಡಿಸುವುದು, ವಿವಿಧ ಘೋಷಣೆಗಳ ಫಲಕಗಳನ್ನು ಹಿಡಿದು ಬೈಕ್ ಜಾಥಾ ನಡೆಸುವುದು ಹಾಗು ಅರಿವಿನ ರಥ ಉದ್ಘಾಟನೆ ನಡೆಯಲಿದೆ. ತಾಲೂಕು ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ಕಿರಿಯ ವಿಭಾಗದ ನ್ಯಾಯಾಧೀಶರಾದ ರವಿಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ರಂಗಪ್ಪ ವೃತ್ತದಿಂದ ಆರಂಭಗೊಳ್ಳುವ ಜಾಥಾ ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ, ಅಂಬೇಡ್ಕರ್ ವೃತ್ತ ಮೂಲಕ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೆ ಸಾಗಿ ನಂತರ ಹೊಸ ಸೇತುವೆ ರಸ್ತೆ ಮೂಲಕ ನಿರ್ಮಲ ಆಸ್ಪತ್ರೆ ತಲುಪಲಿದೆ. ವಿವಿಧ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ತೆರೇಸ ಮಸ್ಕರೇನ್ಹಸ್ ಕೋರಿದ್ದಾರೆ.
