ಯುವ ಸಮುದಾಯ ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಹಲವಾರು ಯೋಜನೆ
ಬಿಜೆಪಿ ನಗರ ಮಂಡಲ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ, ಪದಗ್ರಹಣ ಕಾರ್ಯಕ್ರಮ
ಭದ್ರಾವತಿ ಬಿಜೆಪಿ ಪಕ್ಷದ ಕಛೇರಿಯಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷ ಪ್ರಜ್ವಲ್ ನಂಜುಂಡಯ್ಯ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಲಿಖಿತ್ ಮತ್ತು ತೇಜಸ್‌ರವರ ನೇತೃತ್ವದಲ್ಲಿ ಹಾಗು ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನೂತನ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ಹಾಗೂ ಪದಗ್ರಹಣ ಕಾರ್ಯಕ್ರಮ ಜರುಗಿತು.
ಭದ್ರಾವತಿ: ಯುವ ಸಮುದಾಯ ದೇಶದ ಶಕ್ತಿ ಹಾಗೂ ಭವಿಷ್ಯದ ನಿರ್ಮಾತೃ ಎಂಬ ಆಶಯದೊಂದಿಗೆ ಕೇಂದ್ರ ಸರ್ಕಾರ ಯುವ ಸಮುದಾಯ ಸ್ವಾವಲಂಬಿಯನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
ಅವರು ಪಕ್ಷದ ಕಛೇರಿಯಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷ ಪ್ರಜ್ವಲ್ ನಂಜುಂಡಯ್ಯ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಲಿಖಿತ್ ಮತ್ತು ತೇಜಸ್‌ರವರ ನೇತೃತ್ವದಲ್ಲಿ ನೂತನ ಯುವ ಮೋರ್ಚಾ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆ ಹಾಗೂ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಯುವಕರು, ರೈತರು, ಮಹಿಳೆಯರು ಹಾಗೂ ಬಡವರ ಸಬಲೀಕರಣಕ್ಕಾಗಿ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದೆ. ಯುವಕರನ್ನು ಸ್ವಾವಲಂಬಿಗಳನ್ನಾಗಿ ಹಾಗೂ ಉದ್ಯೋಗ ಸೃಷ್ಟಿಕರ್ತರನ್ನಾಗಿ ರೂಪಿಸುವ ಉದ್ದೇಶದಿಂದ ಸ್ಕಿಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ, ಸ್ಟ್ಯಾಂಡ್‌ಅಪ್ ಇಂಡಿಯಾ, ಪ್ರಧಾನಮಂತ್ರಿ ಮುದ್ರಾ ಯೋಜನೆ, ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (ಪಿಎಂಕೆವಿವೈ), ಡಿಜಿಟಲ್ ಇಂಡಿಯಾ ಹಾಗೂ ಖೇಲೋ ಇಂಡಿಯಾ ಸೇರಿದಂತೆ ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಈ ಯೋಜನೆಗಳ ಮಾಹಿತಿಯನ್ನು ಸಮಾಜದ ಪ್ರತಿಯೊಬ್ಬ ಯುವಕರಿಗೂ ತಲುಪಿಸುವ ಜವಾಬ್ದಾರಿ ಯುವ ಮೋರ್ಚಾ ಕಾರ್ಯಕರ್ತರ ಮೇಲಿದೆ ಎಂದರು.
ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ದರ್ಶನ್ ಹಾಗೂ ನಗರ ಯುವ ಮೋರ್ಚಾ ಉಸ್ತುವಾರಿ ಸಂಜಯ್ ಅವರು ಮಾತನಾಡಿ, ನೂತನ ಪದಾಧಿಕಾರಿಗಳು ಪಕ್ಷದ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವುದರ ಜೊತೆಗೆ ಸಂಘಟನೆ ಬಲವರ್ಧನೆ ಹಾಗೂ ಸಮಾಜಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಯುವ ಮೋರ್ಚಾ ಉಪಾಧ್ಯಕ್ಷರಾಗಿ ಮೋಹನ್, ರವಿ, ಹೇಮಂತ್ ಹಾಗೂ ಪವನ್, ಕಾರ್ಯದರ್ಶಿಗಳಾಗಿ ಶರತ್, ಚೇತನ್ ಜಿ.ಎಸ್, ಪ್ರೀತಮ್ ಹಾಗೂ ಸಮೀರ್, ಕೋಶಾಧ್ಯಕ್ಷರಾಗಿ ಪ್ರೀತಮ್ ಗೌಡ ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಮನು, ಚಂದ್ರಶೇಖರ್, ಪುಟ್ಟಣ್ಣ, ಹರ್ಷ, ಶರತ್, ಗೋಪಾಲ್, ಗಣೇಶ್, ಉಜ್ವಲ್, ಮನೋಜ್ ಬಿ.ಎಚ್, ಸುಹಾಸ್, ಸಾಗರ್, ಯಶು, ಮದನ್, ವಿನೀತ್, ವೆಂಕಟೇಶ್ ಹಾಗೂ ಲಿಖಿತ್ ಅವರಿಗೆ ಜವಾಬ್ದಾರಿಗಳನ್ನು ಅಧಿಕೃತವಾಗಿ ಘೋಷಿಸಿ ಪದಗ್ರಹಣ ನೆರವೇರಿಸಿಕೊಡಲಾಯಿತು.
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಘುರಾವ್ ಹಾಗೂ ಚೆನ್ನೇಶ್, ಬಿಜೆಪಿ ಮುಖಂಡ ಮಂಗೋಟೆ ರುದ್ರೇಶ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರದೀಪ್ ಗೌಡರ್, ಮಂಡಲ ಕಾರ್ಯದರ್ಶಿ ಧನುಷ್ ಬೋಸ್ಲೆ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಯುವ ಮೋರ್ಚಾ ಪದಾಧಿಕಾರಿಗಳು ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.
