ಶಾಲೆಯಿಂದ ದೂರ ಉಳಿದ ಮಕ್ಕಳ ಗುರುತಿಸಿ ಪುನಃ ಶಾಲೆಗೆ ಸೇರ್ಪಡೆ

ಜಿಲ್ಲಾ ಪೊಲೀಸ್ ವಿನೂತನ ಕಾರ್ಯಯೋಜನೆಗೆ ವ್ಯಾಪಕ ಪ್ರಶಂಸೆ 


ಜಿಲ್ಲಾ ಪೊಲೀಸ್ ವತಿಯಿಂದ ಸಾಮಾಜಿಕ ಜವಾಬ್ದಾರಿ ಕಾರ್ಯಯೋಜನೆಯಡಿ ಇದೀಗ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಪ್ರಯತ್ನ ಕೈಗೊಳ್ಳಲಾಗುತ್ತಿದೆ. ಭದ್ರಾವತಿ ತಾಲೂಕಿನ ಗೌಡ್ರಳ್ಳಿ ಗ್ರಾಮದಲ್ಲಿ ೩ ಮಕ್ಕಳನ್ನು ಗುರುತಿಸಿ ಪುನಃ ಶಾಲೆಗೆ ಸೇರಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 
    ಭದ್ರಾವತಿ : ಜಿಲ್ಲಾ ಪೊಲೀಸ್ ವತಿಯಿಂದ ಸಾಮಾಜಿಕ ಜವಾಬ್ದಾರಿ ಕಾರ್ಯಯೋಜನೆಯಡಿ ಇದೀಗ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಪ್ರಯತ್ನ ಕೈಗೊಳ್ಳಲಾಗುತ್ತಿದೆ. 
    ಪೊಲೀಸರು ಸಹ ಸಮಾಜದ ಒಂದು ಭಾಗ ಎಂಬುದನ್ನು ಇತ್ತೀಚಿನ  ಕೆಲವು ವರ್ಷಗಳಿಂದ ಇಲಾಖೆ ರೂಪಿಸುತ್ತಿರುವ ಕಾರ್ಯಯೋಜನೆಗಳು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುತ್ತಿವೆ. ಪೊಲೀಸರು ಎಂದರೆ ಕೇವಲ ಗಲಭೆಗಳನ್ನು ನಿಯಂತ್ರಿಸುವವರು, ರೌಡಿ, ಪುಂಡ-ಪೋಕರಿಗಳನ್ನು ಸೆದೆ ಬಡಿಯುವವರು, ಕೊಲೆ, ಸುಲಿಗೆ, ಕಳ್ಳಕಾಕರನ್ನು ಹಿಡಿಯುವವರು ಎಂಬ ಭಾವನೆ ಇಂದಿಗೂ ಸಮಾಜದಲ್ಲಿ ಮೂಡಿದೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲಾ ಪೊಲೀಸ್ ಸಮುದಾಯದೊಂದಿಗೆ ಬೆರೆಯುವ ನಿಟ್ಟಿನಲ್ಲಿ ವಿನೂತನ ಕಾರ್ಯಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಮನೆ ಮನೆಗೆ ಪೊಲೀಸ್ ಹೆಚ್ಚು ಪರಿಣಾಮಕಾರಿಯಾಗಿದ್ದು, ಪ್ರತಿಯೊಂದು ಮನೆಯ ಕುಂದು-ಕೊರತೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ಹುಡುಕಿಕೊಡುವಲ್ಲಿ ಯಶಸ್ವಿಯಾಗುತ್ತಿದೆ. ಇದೀಗ ಇಂತಹ ಮತ್ತೊಂದು ಕಾರ್ಯಯೋಜನೆಯನ್ನು ಜಿಲ್ಲಾ ಪೊಲೀಸ್ ಅನುಷ್ಠಾನಗೊಳಿಸಿದೆ. ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಪುನಃ ಶಾಲೆಗೆ ಸೇರಿಸುವ ಅಭಿಯಾನಕ್ಕೆ ಮುಂದಾಗಿದೆ. 
    ಬಡತನ ಸೇರಿದಂತೆ ವಿವಿಧ ಕಾರಣಗಳಿಂದ ಶಾಲೆಯಿಂದ ದೂರ ಉಳಿದ ಮಕ್ಕಳನ್ನು ಗುರುತಿಸಿ ಪುನಃ ಶಾಲೆಗೆ ಸೇರಿಸುವ ಕಾರ್ಯ ಯೋಜನೆಯಡಿ ಪೊಲೀಸ್ ಸಿಬ್ಬಂದಿಗಳು ತೊಡಗಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಶಾಲೆಯಿಂದ ದೂರ ಉಳಿದ ಸಾಕಷ್ಟು ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಲಾಗಿದೆ. ಜು.೧೦ರ ಶುಕ್ರವಾರ ತಾಲೂಕಿನ ಗೌಡ್ರಳ್ಳಿ ಗ್ರಾಮದಲ್ಲಿ ಶಾಲೆಯಿಂದ ದೂರ ಉಳಿದಿರುವ ೩ ಮಕ್ಕಳನ್ನು ಗುರುತಿಸಿ ಅವರ ಪೋಷಕರೊಂದಿಗೆ ಪೊಲೀಸ್ ಸಿಬ್ಬಂದಿಗಳು ಸiಲೋಚನೆ ನಡೆಸಿ, ಅವರ ಮನವೊಲಿಸಿ ಪುನಃ ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸ್ ಇಲಾಖೆಯ ಈ ಉತ್ತಮ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.