ದೊಣಬಘಟ್ಟ, ಬಿಳಿಕಿ ಗ್ರಾಮ ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಡಿಪಿಆರ್

ಸೂಕ್ತ ಕ್ರಮ ಕೈಗೊಳ್ಳಲು ಕುಡಿಯುವ ನೀರು, ನೈರ್ಮಲ್ಯ ಇಲಾಖೆಗೆ ಮನವಿ 


    ಭದ್ರಾವತಿ : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಣಬಘಟ್ಟ ಹಾಗು ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಸಂಬಂಧ ಕಾಮಗಾರಿ ಕೈಗೊಳ್ಳಲು ಅಂದಾಜು ಪಟ್ಟಿ(ಡಿಪಿಆರ್) ತಯಾರಿಸಲು ಸಲಹಾ ಸಂಸ್ಥೆ ಗುರುತಿಸಲು ಪ್ರಸ್ತಾವನೆ ಸಲ್ಲಿಕೆಯಾಗಿರುವ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪ್ರಭಾರ ಪ್ರಧಾನ ಅಭಿಯಂತರರಾದ ಎ. ಸುನಂದ ಅವರಿಗೆ ನಗರದ ಶ್ರೀ ಡಿ.ದೇವರಾಜ ಅರಸು ಜನಸ್ಪಂದನ ಸೇವಾ ಟ್ರಸ್ಟ್ ವತಿಯಿಂದ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. 
    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಣಬಘಟ್ಟ ಹಾಗೂ ಬಿಳಿಕಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಪ್ರಸ್ತುತ ಬಿಳಿಕಿ ಕೆರೆಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಕೆರೆಯಲ್ಲಿ ಜಡ್ಡು ವಿಪರೀತ ಪ್ರಮಾಣದಲ್ಲಿ ಬೆಳೆದಿರುವುದರಿಂದ, ಮೀನು ಸಾಕಾಣಿಕೆ ಮಾಡುತ್ತಿರುವುದರಿಂದ ಹಾಗೂ ವ್ಯವಸಾಯಕ್ಕೆ ಬಳಸಲಾದ ರಾಸಾಯನಿಕ ಗೊಬ್ಬರ, ಕೀಟನಾಶಕಗಳು, ಕೆರೆಯ ನೀರಲ್ಲಿ ಸೇರ್ಪಡೆಯಾಗುತ್ತಿರುವುದರಿಂದ, ಸತ್ತ ಪ್ರಾಣಿಗಳು ಕೆರೆಯಲ್ಲಿ ಕಂಡು ಬರುತ್ತಿರುವುದರಿಂದ ಕೆರೆಯ ನೀರು ಕುಡಿಯಲು ಯೋಗ್ಯವಾಗಿಲ್ಲ. 
    ಗ್ರಾಮಸ್ಥರಿಗೆ  ಕುಡಿಯಲು ಯೋಗ್ಯವಲ್ಲದ,  ಕಲ್ಮಶದಿಂದ ಕೂಡಿರುವ ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಗ್ರಾಮಸ್ಥರ ಆರೋಗ್ಯ ಹದಗೆಡುತ್ತಿದೆ. ಅಲ್ಲದೆ ಗ್ರಾಮಸ್ಥರು  ಕುಡಿಯಲು ಶುದ್ದ ನೀರು ಬೇರೆಡೆಯಿಂದ  ತರುತ್ತಿದ್ದು, ಇವರ ಸಂಕಷ್ಟ ಹೆಚ್ಚಿನದಾಗಿದೆ. ಇದನ್ನು ಮನಗಂಡು ದೊಣಬಘಟ್ಟ ಹಾಗೂ ಬಿಳಿಕಿ ಗ್ರಾಮಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು ಕೆರೆಯ ನೀರಿನ ಬದಲಿಗೆ ಗ್ರಾಮಸ್ಥರಿಗೆ ಪರಿಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡಲು ಕಾಗದನಗರ ಬಳಿ ಇರುವ ಭದ್ರಾನದಿಯಿಂದ ನೀರು ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಗಮನ ತಂದಿರುವ ಹಿನ್ನಲೆಯಲ್ಲಿ ಅಧೀಕ್ಷಕ ಇಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವೃತ್ತ, ದಾವಣಗೆರೆ ಇವರಿಂದ ಪ್ರಧಾನ ಅಭಿಯಂತರರು, ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಇವರಿಗೆ ಜೂ.೩೦ ರಂದು ಅಂದಾಜು ಪಟ್ಟಿ ತಯಾರಿಸಲು (ಡಿ.ಪಿ.ಆರ್) ಸಲಹಾ ಸಂಸ್ಥೆ ಗುರುತಿಸಲು  ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಹಿನ್ನಲೆಯಲ್ಲಿ ಈ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಟ್ರಸ್ಟ್ ಛೇರ್ಮನ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್. ವೇಣುಗೋಪಾಲ್ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ವಿ ಗಿರಿ  ಮನವಿಯಲ್ಲಿ ಒತ್ತಾಯಿಸಿದ್ದಾರೆ.