ಸಿದ್ದಾರ್ಥ ಅಂಧರ ಕೇಂದ್ರದಲ್ಲಿ `ಸ್ವಚ್ಛ ಭಾರತ ಅಭಿಯಾನ, ಪರಿಸರ ದಿನಾಚರಣೆ
ಭದ್ರಾವತಿ ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಿಂದ ಜಾವಳ್ಳಿ ಜ್ಞಾನದೀಪ ಶಾಲೆ ಸಹಯೋಗದೊಂದಿಗೆ `ಸ್ವಚ್ಛ ಭಾರತ ಅಭಿಯಾನ ಮತ್ತು ಪರಿಸರ ದಿನಾಚರಣೆ' ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರದಿಂದ ಜಾವಳ್ಳಿ ಜ್ಞಾನದೀಪ ಶಾಲೆ ಸಹಯೋಗದೊಂದಿಗೆ `ಸ್ವಚ್ಛ ಭಾರತ ಅಭಿಯಾನ ಮತ್ತು ಪರಿಸರ ದಿನಾಚರಣೆ' ಹಮ್ಮಿಕೊಳ್ಳಲಾಗಿತ್ತು.
ಜ್ಞಾನದೀಪ ಶಾಲೆಯ ೨೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಅಂಧರ ಕೇಂದ್ರದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಂಡು ಸಸಿಗಳನ್ನು ನೆಡುವ ಮೂಲಕ ಸಮುದಾಯ ಸೇವೆ ಮತ್ತು ಸಾಮಾಜಿಕ ಅರಿವು ಕುರಿತು ಜಾಗೃತಿ ಮೂಡಿಸಿದರು. ಅಲ್ಲದೆ ಅಂಧ ವಿಕಲಚೇತನರ ವಿಶಿಷ್ಟ ಹಾಗು ವಿಭಿನ್ನ ರೀತಿಯ ಓದು, ಬರಹ ತರಬೇತಿ ವೀಕ್ಷಿಸಿ ಮಾಹಿತಿ ಪಡೆದರು.
ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂಧ ವಿಕಲಚೇತನರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ ಹಾಗು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಿದ್ದಾರ್ಥ ಅಂಧರ ಕೇಂದ್ರದ ಕೊಡುಗೆಯನ್ನು ಪ್ರಶಂಸಿಸಿದರು.
ಜ್ಞಾನದೀಪ ಶಾಲೆಯ ಶ್ರೀಕಾಂತ್ ಗೋಸಾನಿ ಅವರು ವಿದ್ಯಾರ್ಥಿಗಳಲ್ಲಿ ಸಮುದಾಯ ಸೇವೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ಬಗ್ಗೆ ವಿವರಿಸಿದರು. ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯೆ ಡಾ. ಪ್ರೀತಿ, ನಗರಸಭೆ ಇಂಜಿನಿಯರ್ ಸಂತೋಷ್ ಪಾಟೀಲ್, ರಿಲಯನ್ಸ್ ಕಂಪನಿಯ ಅಶೋಕ್ ಕುಮಾರ್, ಜ್ಞಾನದೀಪ ಶಾಲೆಯ ಶಿಕ್ಷಕರಾದ ಶ್ವೇತ, ಸಾನಿಯಾ, ಸಿದ್ದಾರ್ಥ ಅಂಧರ ಕೇಂದ್ರದ ಎಸ್.ಸೃಷ್ಟಿ ಉಪಸ್ಥಿತರಿದ್ದರು. .
ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜ್ಞಾನದೀಪ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕರಾದ ಜಗದೀಶ್ ಸ್ವಾಗತಿಸಿ, ಶಾಂತಲಾ ನಿರೂಪಿಸಿದರು. ಸಿದ್ದಾರ್ಥ ಅಂಧರ ಕೇಂದ್ರದ ವಿಕಲಚೇತನರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
