ಇಎಸ್ಐ ಸೌಲಭ್ಯಗಳನ್ನು ಮರುಸ್ಥಾಪಿಸಿ ಬಡಕಾರ್ಮಿಕರು, ಕುಟುಂಬ ವರ್ಗದ ಹಿತ ಕಾಪಾಡಿ
ಬಿಜೆಪಿ ನಗರ, ಗ್ರಾಮಾಂತರ ಮಂಡಲದಿಂದ ಪ್ರತಿಭಟನೆ ನಡೆಸಿ ಮನವಿ
ಭಾರತೀಯ ಜನತಾ ಪಕ್ಷ ನಗರ ಹಾಗೂ ಗ್ರಾಮಾಂತರ ಮಂಡಲವತಿಯಿಂದ ಭದ್ರಾವತಿ ನಗರದ ಕಾರ್ಮಿಕರ ಚಿಕಿತ್ಸಾ ಕೇಂದ್ರ (ಇಎಸ್‌ಐ ಡಿಸ್ಪೆನ್ಸರಿ)ದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಉಲ್ಲೇಖ ಪತ್ರ(ರೆಫೆರಲ್ ಲೆಟರ್) ಸೌಲಭ್ಯವನ್ನು ಮರುಸ್ಥಾಪಿಸಲು ಹಾಗೂ ಸ್ಥಳೀಯವಾಗಿ ಅಗತ್ಯವಿರುವ ಖಾಸಗಿ ಆಸ್ಪತ್ರೆಗಳ ಒಪ್ಪಂದವನ್ನು ದೆಹಲಿಯ ಇಎಸ್ ಐ ಪ್ರಧಾನ ಕಚೇರಿಯ ಮಹಾನಿರ್ದೇಶಕರು ನವೀಕರಿಸಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಭದ್ರಾವತಿ: ಭಾರತೀಯ ಜನತಾ ಪಕ್ಷ ನಗರ ಹಾಗೂ ಗ್ರಾಮಾಂತರ ಮಂಡಲವತಿಯಿಂದ ನಗರದ ಕಾರ್ಮಿಕರ ಚಿಕಿತ್ಸಾ ಕೇಂದ್ರ (ಇಎಸ್‌ಐ ಡಿಸ್ಪೆನ್ಸರಿ)ದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಉಲ್ಲೇಖ ಪತ್ರ(ರೆಫೆರಲ್ ಲೆಟರ್) ಸೌಲಭ್ಯವನ್ನು ಮರುಸ್ಥಾಪಿಸಲು ಹಾಗೂ ಸ್ಥಳೀಯವಾಗಿ ಅಗತ್ಯವಿರುವ ಖಾಸಗಿ ಆಸ್ಪತ್ರೆಗಳ ಒಪ್ಪಂದವನ್ನು ದೆಹಲಿಯ ಇಎಸ್ ಐ ಪ್ರಧಾನ ಕಚೇರಿಯ ಮಹಾನಿರ್ದೇಶಕರು ನವೀಕರಿಸಬೇಕೆಂದು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಪಕ್ಷದ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹಾಗೂ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯರವರ ನೇತೃತ್ವದಲ್ಲಿ ಜನ್ನಾಪುರ ಬಂಟರ ಭವನದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಚಿಕಿತ್ಸಾ ಕೇಂದ್ರದ ಮುಂಭಾಗ ಪ್ರತಿಭಟನೆ ನಡೆಸಿದ ಪ್ರಮುಖರು ಮಾತನಾಡಿ, ಕ್ಷೇತ್ರದಲ್ಲಿ ಸುಮಾರು 19 ಸಾವಿರ ಇಎಸ್ ಐ ಫಲಾನುಭವಿಗಳು ಇದ್ದು, ಅಗತ್ಯ ಸಮಯದಲ್ಲಿ ಸೂಕ್ತ ಚಿಕಿತ್ಸೆ ಪಡೆಯಲು ಇವರಿಗೆ ಉಲ್ಲೇಖ ಪತ್ರ ಸಿಗುತ್ತಿಲ್ಲ ಎಂದು ದೂರಿದರು.
ಕ್ಷೇತ್ರವೂ ದಶಕಗಳಿಂದಲೂ ಕಾರ್ಮಿಕರ ಮತ್ತು ಕೈಗಾರಿಕಾ ನಗರವೆಂದೇ ಪ್ರಸಿದ್ದಿಯಾಗಿದೆ. ಪ್ರಸ್ತುತ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲೇ ಸುಮಾರು 1400 ಕ್ಕೂ ಹೆಚ್ಚು ಕಾರ್ಮಿಕರು ಇಎಸ್‌ಐ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಅಲ್ಲದೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 12 ರಿಂದ 13 ಸಾವಿರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಭಾಗದ ಪ್ರಮುಖ ಕಾರ್ಖಾನೆಯಾದ ಶಾಹಿ ಗಾರ್ಮೆಂಟ್ಸ್ ಒಂದರಲ್ಲೇ ಸುಮಾರು 10 ಸಾವಿರ ಜನರು ಕೆಲಸ ಮಾಡುತ್ತಿದ್ದು, ಈ ಪೈಕಿ 6 ಸಾವಿರ ಕ್ಕೂ ಹೆಚ್ಚು ಕಾರ್ಮಿಕರು ಪ್ರತಿದಿನ ನಗರದಿಂದಲೇ ಅಲ್ಲಿಗೆ ಪ್ರಯಾಣಿಸುತ್ತಾರೆ. ನಗರದ ಸಣ್ಣಪುಟ್ಟ ಹೋಟೆಲ್ ಗಳು, ವಾಣಿಜ್ಯ ಉದ್ಯಮಗಳಲ್ಲಿ ಕೆಲಸ ಮಾಡುವ ಹತ್ತಾರು ಸಾವಿರ ಕಾರ್ಮಿಕರು ಮತ್ತು ಅವರ ಕುಟುಂಬಗಳು ಇಎಸ್‌ಐ ಯೋಜನೆಯನ್ನು ಅವಲಂಬಿಸಿವೆ. ವೇತನದಿಂದ ಪ್ರತಿ ತಿಂಗಳು ನಿಯಮಿತವಾಗಿ ಇಎಸ್‌ಐ ವಂತಿಗೆಯನ್ನು ಕಡಿತಗೊಳಿಸಲಾಗುತ್ತಿದೆ ಆದರೂ ಸಹ ಸೂಕ್ತ ಚಿಕಿತ್ಸೆ ಲಭಿಸದಿರುವುದು ವಿಪರ್ಯಾಸದ ಸಂತಿಯಾಗಿದೆ ಎಂದರು.
ತಕ್ಷಣ ಉಂಟಾಗಿರುವ ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುವ ಜೊತೆಗೆ ಸ್ಥಳದಲ್ಲಿಯೇ ಮೊಬೈಲ್ ನಲ್ಲಿ ಸಂಸದ ಬಿ.ವೈ ರಾಘವೇಂದ್ರರವರನ್ನು ಸಂಪರ್ಕಿಸಿ ಅವರ ಗಮನಕ್ಕೂ ತರುವ ಮೂಲಕ ಸಮಸ್ಯೆ ಬಗೆಹಿರಿಸುವಂತೆ ಒತ್ತಾಯಿಸಿದರು. ಅಲ್ಲದೆ ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೂ ಮನವಿ ಮಾಡಿದರು.
ವಿಐಎಸ್ಎಲ್ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಸರಸ್ವತಿ ವಿಜಯಕುಮಾರ್, ಜಿಲ್ಲಾ ವಿಶೇಷ ಆಹ್ವಾನಿತರಾದ ಹಾಲೇಶ್ ಎಸ್. ಕೂಡ್ಲಿಗೆರೆ, ಎಂ. ಮಂಜುನಾಥ್, ಮಂಡಲಗಳ ಪ್ರಧಾನ ಕಾರ್ಯದರ್ಶಿಗಳಾದ ಚೆನ್ನೇಶ್, ರಘುರಾವ್, ಹನುಮಂತ ನಾಯ್ಕ, ಬಿಎಲ್ಎ -1 ಎಂ.ಎಸ್ ಸುರೇಶಪ್ಪ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರದೀಪ್ ಗೌಡರ್, ಮಹಿಳಾ ಕಾರ್ಯಕರ್ತರು ಮಂಡಲದ ಪದಾಧಿಕಾರಿಗಳು ಹಾಗೂ ಪ್ರಮುಖರು, ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
