ರಾಜಕಾರಣಿಗಳು ಶಾಶ್ವತ ಅಲ್ಲ, ಸರ್ಕಾರಿ ಅಧಿಕಾರಿಗಳು ಮಾಡುವ ಕೆಲಸ ಶಾಶ್ವತ

ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಇಲ್ಲವಾದಲ್ಲಿ ಭವಿಷ್ಯದಲ್ಲಿ ಸಂಕಷ್ಟ 


ಭದ್ರಾವತಿ ಉಳಿಸಿ ಹೋರಾಟ ವೇದಿಕೆ ನೇತೃತ್ವದಲ್ಲಿ ಬುಧವಾರ ತಾಲೂಕು ಕಛೇರಿ ಮುಂಭಾಗ ಬೃಹತ್ ಪ್ರತಿಭಟನಾ ಧರಣಿ ನಡೆಸಲಾಯಿತು. 
    ಭದ್ರಾವತಿ : ಕ್ಷೇತ್ರದಲ್ಲಿ ಶಾಸಕರು ಹಾಗು ಅವರ ಕುಟುಂಬದವರ ಪ್ರಭಾವಕ್ಕೆ ಒಳಗಾಗಿ ಅಕ್ರಮಗಳಿಗೆ ಬೆಂಬಲ ನೀಡುವ ಮೂಲಕ ಸರ್ಕಾರಿ ಅಧಿಕಾರಿಗಳು ತಮ್ಮನ್ನು ಮಾರಿಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು, ರಾಜಕಾರಣಿಗಳು ಶಾಶ್ವತ ಅಲ್ಲ, ನೀವು ಮಾಡುವ ಕೆಲಸ ಶಾಶ್ವತವಾಗಿ ಉಳಿಯಲಿದೆ. ಇದನ್ನು ಅರ್ಥಮಾಡಿಕೊಂಡು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಸಂಕಷ್ಟಕ್ಕೆ ಒಳಗಾಗುವ ಮೂಲಕ ತಮ್ಮ ಇಡೀ ಕುಟುಂಬ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಬುಧವಾರ ತಾಲೂಕು ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಜೆಡಿಎಸ್ ಹಾಗು ಬಿಜೆಪಿ ಪಕ್ಷದ ಮುಖಂಡರು ಎಚ್ಚರಿಸಿದರು.  
    ಭದ್ರಾವತಿ ಉಳಿಸಿ ಹೋರಾಟ ವೇದಿಕೆ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಕ್ಷೇತ್ರದ ಬಹುತೇಕ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಧಿಕಾರಿಗಳು, ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ ಎಂಬುದು ಮರೆಯಾಗಿದೆ.  ಕೊಲೆ, ಸುಲಿಗೆ, ದರೋಡೆ, ಗೂಂಡಾಗಿರಿ ಸೇರಿದಂತೆ ಕಾನೂನುಬಾಹಿರ ಕೃತ್ಯಗಳು ಹಾಗು ಓಸಿ ಮಟ್ಕಾ, ಇಸ್ಪೀಟ್ ಸೇರಿದಂತೆ ಇನ್ನಿತರ ದಂಧೆಗಳು ಮತ್ತು ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದೆ. ಆದರೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡು ಇವುಗಳನ್ನು ಮಟ್ಟ ಹಾಕುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. 
    ತಪ್ಪು ಮಾಡಿರುವವ ವಿರುದ್ಧ ಕ್ರಮ ಕೈಗೊಳ್ಳುವ ಬದಲು ತಪ್ಪು ಮಾಡದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಧರ್ಮ ಮಾರ್ಗದಲ್ಲಿ ನಡೆಯಬೇಕಾದ ಪೊಲೀಸ್ ಅಧಿಕಾರಿಗಳು ರಾಜಕಾರಣಿಗಳ ಮಾತಿಗೆ ಬದ್ಧರಾಗಿ ಅಧರ್ಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಪ್ರತಿಯೊಂದ ಸರ್ಕಾರಿ ದಾಖಲೆಗಳನ್ನು ಪಡೆಯಲು ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ರಮವಾಗಿ ಕೆರೆ, ಗೋಮಾಳ ಸೇರಿದಂತೆ ಸರ್ಕಾರಿ ಜಾಗಳನ್ನು ಕಬಳಿಕೆ ಮಾಡಿ ತಮಗೆ ಇಷ್ಟ ಬಂದವರಿಗೆ ಮಂಜೂರಾತಿ ಮಾಡಲಾಗುತ್ತಿದೆ. ಹಲವು ಅಕ್ರಮಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದಾರೆ. ಇವುಗಳ ವಿರುದ್ಧ ಉನ್ನತ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.   
    ಪೊಲೀಸ್ ಉಮೇಶ್ ಹಾಗು ಅವರ ಅಣ್ಣನ ಮಗನ ವಿರುದ್ಧ ದಾಖಲಿಸಲಾಗಿರುವ ಪ್ರಕರಣಗಳನ್ನು ತಕ್ಷಣವೇ ಹಿಂಪಡೆಯಬೇಕು. ಕ್ಷೇತ್ರದಲ್ಲಿ ನಡೆಯುತ್ತಿರುವ ನಕಲಿ ನಿವೇಶನ ದಾಖಲೆ ಸೃಷ್ಟಿ ಹಾಗು ಗೂಂಡಾಗಿರಿ ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಖುದ್ದಾಗಿ ಪ್ರತಿಭಟನಾ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಸ್ವೀಕರಿಸುವಂತೆ ಆಗ್ರಹಿಸಿದರು.  
    ಬೃಹತ್ ಪ್ರತಿಭಟನಾ ಧರಣಿಯಲ್ಲಿ ಜೆಡಿಎಸ್ ಪಕ್ಷದ ಪ್ರಮುಖರಾದ ಶಾರದ ಅಪ್ಪಾಜಿ, ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಡಿ. ಆನಂದ್, ಮಧುಸೂದನ್, ತಿಮ್ಮೇಗೌಡ, ರೂಪಾವತಿ, ಮೋಹನ್‌ರಾವ್, ಮಂಜುಳಾ ಸುಬ್ಬಣ್ಣ, ಅರುಣ್ ಕುಮಾರ್, ಎನ್. ರಾಮಕೃಷ್ಣ, ಎಚ್.ಬಿ ರವಿಕುಮಾರ್, ಗುಣಶೇಖರ್, ಸಾವಿತಮ್ಮ ಪುಟ್ಟೇಗೌಡ, ನಿರಂಜನ, ಅಜ್ಮಲ್, ಧರ್ಮರಾಜ್, ಧರ್ಮೇಗೌಡ, ಜಯರಾಮ್, ಸಂಜೀವ ಕುಮಾರ್,ಆನಂದ್, ಭಾಗ್ಯಮ್ಮ, ವಿಶಾಲಾಕ್ಷಿ, ಬಿಜೆಪಿ ಪಕ್ಷದ ಪ್ರಮುಖರಾದ ಕೆ.ಎಚ್ ತೀರ್ಥಯ್ಯ, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಚನ್ನೇಶ್, ರಘುರಾವ್, ಗೋಕುಲ್ ಕೃಷ್ಣ, ರಾಜಶೇಖರ ಉಪ್ಪಾರ, ಎಂ. ಮಂಜುನಾಥ್, ಪೇಪರ್ ಸುರೇಶ್, ಲಕ್ಷ್ಮಣ್, ದೇವರಾಜ್ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.