ಅಗ್ನಿಶಾಮಕ ಸಿಬ್ಬಂದಿಗಳಿಂದ ಸಿಲುಕಿಕೊಂಡಿದ್ದ ಎರಡು ಗೂಳಿಗಳ ರಕ್ಷಣೆ


ಮನೆಯ ಮಹಡಿ ಮೇಲೆ ಹಾಗು ಓಣಿಯೊಳಗೆ ಸಿಲುಕಿಗೊಂಡಿದ್ದ ಎರಡು ಬೀಡಾಡಿ ಗೂಳಿಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ಭದ್ರಾವತಿನಗರಸಭೆ ವ್ಯಾಪ್ತಿಯ ಅಪ್ಪರ್‌ಹುತ್ತಾದಲ್ಲಿ ನಡೆದಿದೆ. 
    ಭದ್ರಾವತಿ : ಮನೆಯ ಮಹಡಿ ಮೇಲೆ ಹಾಗು ಓಣಿಯೊಳಗೆ ಸಿಲುಕಿಗೊಂಡಿದ್ದ ಎರಡು ಬೀಡಾಡಿ ಗೂಳಿಗಳನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿರುವ ಘಟನೆ ನಗರಸಭೆ ವ್ಯಾಪ್ತಿಯ ಅಪ್ಪರ್‌ಹುತ್ತಾದಲ್ಲಿ ನಡೆದಿದೆ. 
    ಶನಿವಾರ ಮಧ್ಯರಾತ್ರಿ ಬೀದಿಯಲ್ಲಿ ಬೀಡಾಡಿ ಗೂಳಿಗಳು ಗುದ್ದಾಡಿಕೊಂಡು ಅಪ್ಪರ್‌ಹುತ್ತಾ ಚಂದ್ರಶೇಖರ್ ಎಂಬುವವರ ಮನೆ ಬಳಿ ಬಂದಿದ್ದು, ಏಕಾಏಕಿ ಎರಡು ಗೂಳಿಗಳು  ಚಂದ್ರಶೇಖರ್ ಅವರ ವಠಾರ ಸೇರಿಕೊಂಡಿವೆ. ಈ ಪೈಕಿ ಒಂದು ಗೂಳಿ ಮನೆಯ ಮೆಟ್ಟಿಲು ಹತ್ತಿದ್ದರೆ, ಮತ್ತೊಂದು ಗೂಳಿ ಮನೆಯ ಓಣಿಯಲ್ಲಿ ನುಗ್ಗಿದೆ. ಓಣಿಯೊಳಗೆ ನುಗ್ಗಿದ ಗೂಳಿಗೆ ಹಿಂದಕ್ಕೆ ಬರಲಾಗದೆ ಪರಿತಪಿಸಿದರೆ  ಮೆಟ್ಟಿಲು ಹತ್ತಿದ ಗೂಳಿಗೆ ಹಿಂದಿರುಗಿ ಇಳಿಯಲಾಗದೆ ಎಲ್ಲೆಂದರಲ್ಲಿ ನುಗ್ಗಲು ಪ್ರಯತ್ನಿಸಿ ಮಹಡಿ ಸೇರಿಕೊಂಡಿದೆ. ಬೆಳಗಿನವರೆಗೂ ಎರಡು ಗೂಳಿಗಳು ಅಲ್ಲಿಯೆ ಉಳಿದಿವೆ. 
    ಮಾಹಿತಿ ತಿಳಿದು ಭಾನುವಾರ ಬೆಳಗ್ಗೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯರ ನೆರವಿನೊಂದಿಗೆ ಮಹಡಿ ಮೇಲಿದ್ದ ಗೂಳಿಯನ್ನು ಕಾಲಿಗೆ ಹಗ್ಗ ಕಟ್ಟಿ ಇಳಿಸಿದರೆ, ಓಣಿಯಲ್ಲಿದ್ದ ಗೂಳಿಯನ್ನು ನಿಧಾನವಾಗಿ ಹಿಂದಕ್ಕೆ ತರುವ ಮೂಲಕ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. 
    ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿಗಳಾದ ಆನಂದ, ಸುರೇಶ್, ಹರೀಶ್, ಸಂತೋಷ್ ಪಾಲ್ಗೊಂಡಿದ್ದರು.