ಸೆ.೮ರಂದು ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಮಹೋತ್ಸವ
ಆ.೨೯ರಿಂದ ಪ್ರತಿ ದಿನ ವಿವಿಧ ಧಾರ್ಮಿಕ ಆಚರಣೆಗಳು
ಭದ್ರಾವತಿ ನಗರಸಭೆ ವ್ಯಾಪ್ತಿಯ ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ೪೩ನೇ ವಾರ್ಷಿಕ ಮಹೋತ್ಸವ ಕುರಿತು ಪುಣ್ಯಕ್ಷೇತ್ರದ ಗುರು ಫಾದರ್ ಸ್ಟೀವನ್ ಡೇಸಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭದ್ರಾವತಿ: ನಗರಸಭೆ ವ್ಯಾಪ್ತಿಯ ಗಾಂಧಿನಗರದ ವೆಳಾಂಗಣಿ ಆರೋಗ್ಯ ಮಾತೆಯ ಪುಣ್ಯಕ್ಷೇತ್ರದ ೪೩ನೇ ವಾರ್ಷಿಕ ಮಹೋತ್ಸವ ಸೆ.೮ರಂದು ನಡೆಯಲಿದ್ದು, ಆ.೨೯ರಿಂದ `ವೆಳಾಂಗಣಿ ಮಾತೆ, ಅಂಚಿನಲ್ಲಿರುವವರಿಗೆ ಭರವಸೆ, ಘನತೆ ಮತ್ತು ಕ್ರಿಸ್ತನ ಪ್ರೀತಿಯ ಪ್ರತಿಬಿಂಬ' ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತಿ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪುಣ್ಯಕ್ಷೇತ್ರದ ಗುರು ಫಾದರ್ ಸ್ಟೀವನ್ ಡೇಸಾ ತಿಳಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ವೆಳಾಂಗಣಿ ಮಾತೆ, ಅಂಚಿನಲ್ಲಿರುವವರಿಗೆ ಭರವಸೆ, ಘನತೆ ಮತ್ತು ಕ್ರಿಸ್ತನ ಪ್ರೀತಿಯ ಪ್ರತಿಬಿಂಬ' ಆ.೨೯ರ ದಿನದ ಧ್ಯೇಯ ವಾಕ್ಯದೊಂದಿಗೆ ಶಿವಮೊಗ್ಗ ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಡಾ. ಡುಮಿಂಗ್ ಡಯಾಸ್ ಸೆ.೨೯ರ ಸಂಜೆ ೫.೩೦ಕ್ಕೆ ಧ್ವಜಾರೋಹಣ ಮತ್ತು ಆಡಂಬರದ ದಿವ್ಯ ಬಲಿಪೂಜೆ ನೆರವೇರಿಸಲಿದ್ದಾರೆ ಎಂದರು.
ಆ.೩೦ `ವೆಳಾಂಗಣಿ ಮಾತೆ: ಅಂಚಿನಲ್ಲಿರುವವರ ಕರುಣಾಮೂರ್ತಿ' ಧ್ಯೇಯ ವಾಕ್ಯದೊಂದಿಗೆ ಹಿರಿಯರ ದಿನ, ಆ.೩೧ `ವೆಳಾಂಗಣಿ ಮಾತೆ : ಸರ್ವರ ಘನೆಯನ್ನು ಘೋಷಿಸುವ ತಾಯಿ' ಧ್ಯೇಯ ವಾಕ್ಯದೊಂದಿಗೆ ವಿಧವೆ/ವಿಧುರರ ದಿನ, ಸೆ.೧ `ವೆಳಾಂಗಣಿ ಮಾತೆ : ದೀನದಲಿತರ ಆಶಾ ಕಿರಣ' ಧ್ಯೇಯ ವಾಕ್ಯದೊಂದಿಗೆ ಕುಟುಂಬದ ದಿನ, ಸೆ.೨ `ವೆಳಾಂಗಣಿ ಮಾತೆ : ದೀನದಲಿತರ ಆಶಾಕಿರಣ' ಧ್ಯೇಯ ವಾಕ್ಯದೊಂದಿಗೆ ಅವಿವಾಹಿತರ ದಿನ, ಸೆ.೩ `ವೆಳಾಂಗಣಿ ಮಾತೆ : ಸೌಖ್ಯದಾತೆ' ಧ್ಯೇಯ ವಾಕ್ಯದೊಂದಿಗೆ ವ್ಯಾಧಿಷ್ಠರ ದಿನ, ಸೆ.೪ `ವೆಳಾಂಗಣಿ ಮಾತೆ : ಸಂಕಟದಲ್ಲಿರುವವರ ಸಂಗಾತಿ' ಧ್ಯೇಯ ವಾಕ್ಯದೊಂದಿಗೆ ನಿರಾಶ್ರಿತರ ದಿನ, ಸೆ.೫ `ವೆಳಾಂಗಣಿ ಮಾತೆ : ವಿನಮ್ರ ಸೇವಾ ಸಂಪನ್ನೆ' ಧ್ಯೇಯ ವಾಕ್ಯದೊಂದಿಗೆ ಕಾರ್ಮಿಕರ ದಿನ, ಸೆ.೬ `ವೆಳಾಂಗಣಿ ಮಾತೆ : ಅಂಚಿನಲ್ಲಿರುವವರಿಗೆ ಭರವಸೆಯ ಹೊಂಗಿರಣ' ಧ್ಯೇಯ ವಾಕ್ಯದೊಂದಿಗೆ ಧಾರ್ಮಿಕರ/ಸಮಾಜ ಸೇವಕರ ದಿನ, ಸೆ.೭ `ವೆಳಾಂಗಣಿ ಮಾತೆ : ಸುವಾರ್ತೆಯ ಪ್ರೇರಣೆ' ಧ್ಯೇಯ ವಾಕ್ಯದೊಂದಿಗೆ ಯಾತ್ರಿಕರ ದಿನ ಹಾಗು ಸೆ.೮ `ವೆಳಾಂಗಣಿ ಮಾತೆ : ಅಂಚಿನಲ್ಲಿರುವವರಿಗೆ ಭರವಸೆ, ಘನತೆ ಮತ್ತು ಕ್ರಿಸ್ತನ ಪ್ರೀತಿಯ ಪ್ರತಿಬಿಂಬ' ಧ್ಯೇಯ ವಾಕ್ಯದೊಂದಿಗೆ ಸರ್ವರ ದಿನ ಆಚರಿಸಲಾಗುತ್ತಿದೆ ಎಂದರು.
ಪ್ರತಿ ದಿನ ಬೆಳಿಗ್ಗೆ ೮.೩೦ರಿಂದ ೪.೩೦ರವರೆಗೆ ಆಧ್ಯಾತ್ಮಿಕ ನವೀಕರಣ ಧ್ಯಾನಕೂಟ ನಡೆಯಲಿದ್ದು, ಆಧ್ಯಾತ್ಮಿಕ ಸಿದ್ದತೆ, ಧ್ಯಾನ, ಪಾಪ ನಿವೇದನೆ, ವಿಶೇಷ ಪರಮ ಪ್ರಸಾದದ ಆರಾಧನೆ ಮತ್ತು ರೋಗ ಸೌಖ್ಯ ಪ್ರಾರ್ಥನೆ ಪ್ರಭೋಧಕರಾಗಿ ಕಬಳೆ, ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಧರ್ಮಗುರು ವಂದನೀಯ ಸ್ವಾಮಿ, ರೋಮನ್ ಪಿಂಟೋ ಆಗಮಿಸಲಿದ್ದಾರೆ ಎಂದರು.
ಸೆ.೭ರಂದು ಸಂಜೆ ೫ಕ್ಕೆ ಜಪಸರ, ೫.೩೦ಕ್ಕೆ ದಿವ್ಯ ಬಲಿಪೂಜೆ, ೬.೩೦ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಮಾತೆಯ ಅಲಂಕೃತ ಭವ್ಯ ತೇರಿನ ಮೆರವಣಿಗೆ, ನಂತರ ಪರಮ ಪ್ರಸಾದದ ಆರಾಧನೆ ಹಾಗು ಆಶೀರ್ವಾದ ನಡೆಯಲಿದೆ. ಪ್ರತಿ ದಿನ ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ನಿರ್ಮಲ ಆಸ್ಪತ್ರೆಯ ಸುಪೀರಿಯರ್ ಸಿಸ್ಟರ್ ವಿಲ್ಮಾ, ನಿರ್ಮಲ ಸೇವಾ ಕೇಂದ್ರದ ನಿರ್ದೇಶಕಿ ಸಿಸ್ಟರ್ ತೆರೇಸಾ, ಪುಣ್ಯಕ್ಷೇತ್ರದ ಕಾರ್ಯದರ್ಶಿ ಎಲಿಜಾಲಾರೆನ್ಸ್, ನಗರಸಭೆ ಸದಸ್ಯ ಜಾರ್ಜ್, ಅಂತೋಣಿ ವಿಲ್ಸನ್, ಮಾರ್ಟಿನ್, ಪೌಲ್, ಪ್ರೇಮ್, ಬೆನೆಡಿಕ್ಟ್, ಜೆಸ್ಸಿ ಗೊನ್ಸಾಲ್ವಿಸ್, ರೇಷ್ಮಾ, ಸಲೀನ್ ಬ್ಯಾಪ್ಟಿಸ್ಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
