ಈದ್ ಮಿಲಾದ್ ಸಂಭ್ರಮದ ಆಚರಣೆ : ರಕ್ತದಾನ, ಅನ್ನದಾನ ಸೇರಿದಂತೆ ವಿವಿಧ ಸೇವಾ ಕಾರ್ಯಗಳು

ಮೆರವಣಿಗೆಯಲ್ಲಿ ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮ

ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಕ್ತದಾನ ಶಿಬಿರ ಹಾಗು ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.  
    ಭದ್ರಾವತಿ : ಪ್ರವಾದಿ ಮಹಮ್ಮದ್ ಪೈಗಂಬರರ ಜನ್ಮದಿನ ಆಚರಣೆ ಸಂಭ್ರಮದ ಹಿನ್ನಲೆಯಲ್ಲಿ ಬುಧವಾರ ಒಂದೆಡೆ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮತ್ತೊಂದೆಡೆ ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳಿಂದ ಸಾಮಾಜಿಕ ಸೇವಾ ಕಾರ್ಯಗಳು ನೆರವೇರಿದವು. 
    ಮೆರವಣಿಗೆ ಆರಂಭಕ್ಕೂ ಮೊದಲು ನಗರದ ಚನ್ನಗಿರಿ ರಸ್ತೆಯ ಹೊಳೆಹೊನ್ನೂರು ವೃತ್ತದಲ್ಲಿ ಉಸ್ಮಾನಿಯಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜೆಬಿಟಿ ಬಾಬು ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಕ್ತದಾನ ಶಿಬಿರ ಹಾಗು ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು.  ಟ್ರಸ್ಟ್ ಪದಾಧಿಕಾರಿಗಳಾದ ಕಾರ್ಯದರ್ಶಿ ಎಂ. ಮುಸ್ವೀರ್ ಬಾಷಾ, ಖಜಾಂಚಿ ನೂರುಲ್ಲಾ ಷರೀಫ್ ಟ್ರಸ್ಟಿಗಳಾದ ವಹೀದ್, ನೂರು ಅಹಮದ್, ಜಾಕೀರ್, ಖಲಂದರ್, ನವೀದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ  ಚನ್ನಗಿರಿ ರಸ್ತೆಯ ಮಾಸ್ಟರ್ ಕುಷನ್ ವರ್ಕ್ಸ್ ವತಿಯಿಂದ ೧೦ ಸಾವಿರ ಜಿಲೇಬಿ ವಿತರಿಸಲಾಯಿತು. 
    ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ಪೊಲೀಸ್ ನಗರ ವೃತ್ತ ನಿರೀಕ್ಷಕಿ ನಾಗಮ್ಮ, ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್, ಹಿರಿಯ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಜಗನ್ನಾಥ್, ಯುವ ಮುಖಂಡ ಬಿ.ಎಸ್ ಗಣೇಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ರಿಯಾಜ್ ಅಹಮದ್, ಮುನೀರ್ ಬಾಷಾ(ಕನ್ನಡ ಶಿಕ್ಷಕರು) ಸೇರಿದಂತೆ ಇನ್ನಿತರರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. 
    ನಗರದ ಜೀವ ಸಂಜೀವಿನಿ ಸ್ವಯಂಪ್ರೇರಿತ ರಕ್ತ ಕೇಂದ್ರ, ಶಿವಮೊಗ್ಗ ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರ ಹಾಗು ಸುಬ್ಬಯ್ಯ ವೈದ್ಯಕೀಯ ಕಾಲೇಜು, ರಕ್ತ ಕೇಂದ್ರದಿಂದ ದಾನಿಗಳಿಂದ ರಕ್ತ ಸಂಗ್ರಹಿಸಲಾಯಿತು. ಒಟ್ಟು ೧೦೫ ಮಂದಿ ರಕ್ತದಾನ ಮಾಡಿದರು. 
    ಈ ಬಾರಿ ವಿಶೇಷವಾಗಿ ಚನ್ನಗಿರಿ ರಸ್ತೆಯ ಮಾಸ್ಟರ್ ಕುಷನ್ ವರ್ಕ್ಸ್ ವತಿಯಿಂದ ೧೦ ಸಾವಿರ ಜಿಲೇಬಿ ವಿತರಿಸಲಾಯಿತು. ತರೀಕೆರೆ ರಸ್ತೆಯ ಚೌಕ್ ಮಸೀದಿ ಧರ್ಮಗುರುಗಳು, ಪ್ರಮುಖರಾದ ಅಬ್ದುಲ್ ಖಾದರ್, ಇಮ್ರಾನ್, ನವೀದ್, ಶಾಹೀದ್, ಅಫ್ತಾಬ್ ಅಹಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಾವಿರಾರು ಮಂದಿಗೆ ಮಜ್ಜಿಗೆ ವಿತರಿಸಲಾಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಸೇವಾ ಕಾರ್ಯವನ್ನು ಅಭಿನಂದಿಸಿದರು. ಸಂಘದ ಅಧ್ಯಕ್ಷ ಮೆಹಬೂಬ್ ಪಾಷ, ಉಪಾಧ್ಯಕ್ಷ ಇಮ್ರಾನ್, ಸದಸ್ಯರಾದ ಖಲೀಂ, ಹಾಜಾ, ಸಾಧಿಕ್, ಇಮ್ರಾನ್, ಗಫರ್, ರಾಮತ್ ಆಲೀ, ಜಮ್‌ಶಿದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ದೇಶಪ್ರೇಮಿ ಟಿಪ್ಪು ಸುಲ್ತಾನ್ ಯುವಕರ ಸಂಘದಿಂದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪ ಸಾವಿರಾರು ಮಂದಿಗೆ ಮಜ್ಜಿಗೆ ವಿತರಿಸಲಾಯಿತು. ಯುವ ಮುಖಂಡ ಬಿ.ಎಸ್ ಗಣೇಶ್ ಸೇವಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಸೇವಾ ಕಾರ್ಯವನ್ನು ಅಭಿನಂದಿಸಿದರು.
   ಇದೆ ಸಂದರ್ಭದಲ್ಲಿ ಬಡಮಹಿಳೆಯರಿಗೆ ಸೀರೆ ಮತ್ತು ರವಿಕೆ ವಿತರಿಸಲಾಯಿತು.  ಅನ್ನದಾನ, ತಂಪು ಪಾನೀಯ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು.
    ಮಧ್ಯಾಹ್ನ ಸುಮಾರು ೩.೩೦ ಸಮಯಕ್ಕೆ ಹೊಳೆಹೊನ್ನೂರು ವೃತ್ತದಿಂದ ಮರ್ಕಜೀ ಇದಾರ ಅಂಜುಮನ್-ಎ-ಇಸ್ಲಾಹುಲ್ ಮುಸ್ಲಿಮೀನ್ ಅಧ್ಯಕ್ಷ ಅಯೂಬ್ ಖಾನ್‌ರವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ಮಹಮ್ಮದ್ ಫೈಗಂಬರರ ಜನ್ಮಸ್ಥಳ ಮೆಕ್ಕಾ-ಮದೀನಾ ಮಾದರಿಗಳು, ಹಸಿರು ದ್ವಜಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು.  
    ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಮಹಾತ್ಮಗಾಂಧಿ ವೃತ್ತ ಮೂಲಕ ಸಾದತ್ ದರ್ಗಾವರೆಗೂ ಮೆರವಣಿಗೆ ನಡೆಯಿತು. ನಗರದ ವಿವಿಧೆಡೆಗಳ ಮಸೀದಿಗಳ ಧರ್ಮಗುರುಗಳು, ಆಡಳಿತ ಮಂಡಳಿಯವರು, ಮುಸ್ಲಿಂ ಸಮುದಾಯದ ವಿವಿಧ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಮುಖಂಡರು,  ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಮೆರವಣಿಗೆ ಹಿನ್ನಲೆಯಲ್ಲಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುಸ್ಲಿಂ ಸಮುದಾಯದವರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಹಬ್ಬದ ಹಿನ್ನಲೆಯಲ್ಲಿ ಕಳೆದ ಕೆಲವು ದಿನಗಳಿಂದ ಹೆಚ್ಚಿನ ಅಲಂಕಾರ ಕೈಗೊಳ್ಳಲಾಗಿತ್ತು. 

ಭದ್ರಾವತಿಯಲ್ಲಿ ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಮಕ್ಕಳು, ಯುವಕರು, ವಯಸ್ಕರು ಬೇಧಭಾವವಿಲ್ಲದೆ ಅಬ್ಬರದ ಹಾಡಿನ ಸದ್ದಿಗೆ ಕುಣಿದು ಸಂಭ್ರಮಿಸಿದರು.