ಭದ್ರಾವತಿ ವಿಧಾನಸಭಾ ಕ್ಷೇತ್ರ ಕರಡು ಮತದಾರರಪಟ್ಟಿ ಪ್ರಕಟ: 1,74,336 ಮತದಾರರು

4,931 ಮತದಾರರಿಗೆ ನೋಟಿಸ್ ಕಳುಹಿಸಲು ಸಿದ್ದತೆ 


112-ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಐಆರ್ ಕರಡು ಮತದಾರರಪಟ್ಟಿ ಪ್ರಕಟ ಕುರಿತು ಮತದಾರರ ನೊಂದಣಾಧಿಕಾರಿಯಾಗಿರುವ ನೂತನ ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ ಸೋಮವಾರ ತಹಸೀಲ್ದಾರ್ ಕಛೇರಿಯಲ್ಲಿ ಮಾಹಿತಿ ನೀಡಿದರು. 
    ಭದ್ರಾವತಿ: ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯಲ್ಲಿ ಪ್ರಸ್ತುತ 112-ಭದ್ರಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಡು ಮತದಾರರಪಟ್ಟಿಯಲ್ಲಿ 1,74,336 ಮತದಾರರಿದ್ದು, ಈ ಪೈಕಿ 4,931 ಮತದಾರರಿಗೆ ನೋಟಿಸ್ ಕಳುಹಿಸಲಾಗುವುದು ಎಂದು ಮತದಾರರ ನೊಂದಣಾಧಿಕಾರಿಯಾಗಿರುವ ನೂತನ ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ ತಿಳಿಸಿದರು. 
    ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,14,907 ಮತದಾರರಿದ್ದು, 253 ಮತಗಟ್ಟೆಗಳಿವೆ. ಈ ಪೈಕಿ ಶೇ.100ರಷ್ಟು ಎಸ್‌ಐಆರ್ ನಮೂನೆಗಳನ್ನು ವಿತರಿಸಲಾಗಿದ್ದು, ಶೇ.81.12ರಷ್ಟು ಒಟ್ಟು 1,74,336 ನಮೂನೆಗಳು ಗಣಕೀಕರಣಗೊಂಡಿವೆ. ಆ.೨೪ರ ಸೋಮವಾರ 1,74,336 ಕರಡು ಮತದಾರರಪಟ್ಟಿ ಪ್ರಕಟಿಸಲಾಗಿದೆ. ಎಸ್‌ಐಆರ್ ನಮೂನೆಯಲ್ಲಿ ಸೂಕ್ತ ಮಾಹಿತಿ ನೀಡದೆ ಅಥವಾ ಪೂರ್ಣ ಮಾಹಿತಿ ಸಲ್ಲಿಸದ ಹಿನ್ನಲೆಯಲ್ಲಿ ಮ್ಯಾಪಿಂಗ್ ನಡೆಸದ 3,1175 ಹಾಗು ಯಾವುದಕ್ಕೂ ಹೋಲಿಕೆಯಾಗದ (ಅನೋಮಲಿಯಸ್) 1,756 ಒಟ್ಟು 4,931 ಮತದಾರರಿಗೆ ನೋಟಿಸ್ ಕಳುಹಿಸಲು ಸಿದ್ದತೆ ನಡೆಸಲಾಗಿದ್ದು, ಸೂಕ್ತ ಮಾಹಿತಿ ನೀಡಿದ್ದಲ್ಲಿ ಪರಿಶೀಲನೆಗೆ ಒಳಪಡಿಸಲಾಗುವುದು ಎಂದರು. 
    ಕ್ಷೇತ್ರದಲ್ಲಿ ೬,೫೨೯ಮತದಾರರು ನಿಧನ ಹೊಂದಿದ್ದು, ಮತಗಟ್ಟೆ ಅಧಿಕಾರಿಗಳು ಮನೆ ಮನೆಗಳಿಗೆ ತೆರಳಿದ ವೇಳೆಯಲ್ಲಿ 2,714 ಮತದಾರರು ಲಭ್ಯವಾಗದಿರುವುದು, 27,870 ಮತದಾರರು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು ಹಾಗು ಈಗಾಗಲೇ 3,458 ಮತದಾರರು ಎಸ್‌ಐಆರ್ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಹಿನ್ನಲೆಯಲ್ಲಿ 40,571 ನಮೂನೆಗಳು ಸಂಗ್ರಹವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಒಟ್ಟು ಮತದಾರರ ಪಟ್ಟಿಯಿಂದ ಹೊರಗಿಟ್ಟು ಕರಡು ಮತದಾರರಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ 84,758 ಪುರುಷ ಮತ್ತು 89,574  ಮಹಿಳಾ ಹಾಗು 4 ತೃತೀಯ ಲಿಂಗಿಗಳು ಸೇರಿದ್ದಾರೆ. ಕರಡು ಮತದಾರರಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಇದ್ದಲ್ಲಿ ಸೆ.೨೩ರೊಳಗೆ ಸಲ್ಲಿಸಬಹುದಾಗಿದೆ. ಅಂತಿಮ ಮತದಾರರಪಟ್ಟಿ ಅ.27ರಂದು ಪ್ರಕಟಿಸಲಾಗುವುದು ಎಂದರು. 
    ತಹಸೀಲ್ದಾರ್ ಪ್ರದೀಪ್ ದೇವಗಿರಿ, ಚುನಾವಣಾ ವಿಭಾಗದ ಶಿರಸ್ತೇದಾರ್ ಗಿರಿರಾಜ್ ಉಪಸ್ಥಿತರಿದ್ದರು.