ಜಾತಿನಿಂದನೆ ಪ್ರಕರಣಗಳನ್ನು ಕೂಲಂಕುಷವಾರಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ

ಕುಂದುಕೊರತೆ ಸಭೆಯಲ್ಲಿ  ಪರಿಶಿಷ್ಟ ಜಾತಿ/ಪಂಗಡದ ಮುಖಂಡರು ಆಗ್ರಹ


ಭದ್ರಾವತಿ ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪೊಲೀಸ್ ಉಪವಿಭಾಗದ ವತಿಯಿಂದ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆ ಸಭೆ ಆಯೋಜಿಸಲಾಗಿತ್ತು. 
    ಭದ್ರಾವತಿ: ತಾಲೂಕಿನಲ್ಲಿ ಇತ್ತೀಚಿನ ದಿನಗಳಲ್ಲಿ ಜಾತಿನಿಂದನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪೊಲೀಸರು ಜಾತಿನಿಂದನೆ ಪ್ರಕರಣಗಳನ್ನು ಕೂಲಂಕುಷವಾರಿ ಪರಿಶೀಲನೆ ನಡೆಸಿ ಸಂತ್ರಸ್ಥರಿಗೆ ನ್ಯಾಯ ಒದಗಿಸಿಕೊಡಬೇಕೆಂದು  ಪರಿಶಿಷ್ಟ ಜಾತಿ/ಪಂಗಡದ ಮುಖಂಡರು ಆಗ್ರಹಿಸಿದರು. 
    ಹಳೇನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪೊಲೀಸ್ ಉಪವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ/ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು, ಜಾತಿನಿಂದನೆ ಪ್ರಕರಣಗಳನ್ನು ಸರಿಯಾಗಿ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
    ಪರಿಶಿಷ್ಟ ಜಾತಿ/ಪಂಗಡದವರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಎಚ್ಚರವಹಿಸಬೇಕು. ರಂಗಪ್ಪ ವೃತ್ತ ಸಮೀಪ ಪೌರಕಾರ್ಮಿಕ ಕುಟುಂಬದವರು ಹೆಚ್ಚಾಗಿ ವಾಸಿಸುತ್ತಿರುವ ಜೈಭೀಮ್ ನಗರದ ಸೂಕ್ಷ್ಮ ಸ್ಥಳಗಳಲ್ಲಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸುವುದು. ಕುಂದು ಕೊರತೆ ಸಭೆಯನ್ನು ಹೊಳೆಹೊನ್ನೂರು ಭಾಗದಲ್ಲೂ ನಡೆಸುವುದು ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. 
    ಪೊಲೀಸ್ ಉಪ ಅಧೀಕ್ಷಕ ಪ್ರಕಾಶ್ ರಾಥೋಡ್ ಸಭೆಯ ನೇತೃತ್ವವಹಿಸಿದ್ದರು. ವೃತ್ತ ನಿರೀಕ್ಷಕರಾದ ಚಿದಾನಂದ, ನಾಗಮ್ಮ, ಠಾಣಾ ಉಪ ನಿರೀಕ್ಷಕರಾದ ಕವಿತಾ, ಸುನೀಲ್ ಬಿ. ತೇಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಪರಿಶಿಷ್ಟ ಜಾತಿ/ಪಂಗಡಗಳ ಮುಖಂಡರಾದ ನಗರಸಭೆ ಹಿರಿಯ ಸದಸ್ಯ ಬಿ.ಟಿ ನಾಗರಾಜ್, ಕುಪ್ಪಸ್ವಾಮಿ, ಇ.ಪಿ ಬಸವರಾಜ್, ಚಿನ್ನಯ್ಯ, ತೀರ್ಥೇಶ್, ಆರ್. ತಮ್ಮಯ್ಯ, ಕಾಣಿಕ್ ರಾಜ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.