ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ ಸಂಕಲ್ಪ ಅಭಿಯಾನಕ್ಕೆ ಚಾಲನೆ
ಶ್ರೀ ಸತ್ಯಸಾಯಿ ಜ್ಞಾನಪೀಠ ಶಾಲೆಯ ಸುಮಾರು ೨೨೦ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿ
ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ ಸಂಕಲ್ಪ ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಚಾಲನೆ ನೀಡಿದ್ದು, ಭದ್ರಾವತಿ ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯಸಾಯಿ ಜ್ಞಾನಪೀಠ(ಸಿ.ಬಿ.ಎಸ್.ಇ) ಶಾಲೆಯ ಸುಮಾರು ೨೨೦ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.
ಭದ್ರಾವತಿ: ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ ಸಂಕಲ್ಪ ಎಂಬ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಚಾಲನೆ ನೀಡಿದ್ದು, ನಗರದ ನ್ಯೂಟೌನ್ ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶ್ರೀ ಸತ್ಯಸಾಯಿ ಜ್ಞಾನಪೀಠ(ಸಿ.ಬಿ.ಎಸ್.ಇ) ಶಾಲೆಯ ಸುಮಾರು ೨೨೦ ವಿದ್ಯಾರ್ಥಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮೊದಲು ಕ್ಷೇತ್ರಶಿಕ್ಷಣಾಧಿಕಾರಿ ಕೆ.ಸಿ. ಸುರೇಶ್ ಮಾತನಾಡಿ, ವಿದ್ಯಾರ್ಥಿಗಳು ಮಾದಕವಸ್ತು ವ್ಯಸನದಿಂದ ದೂರವಿದ್ದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಪ್ರೌಢಶಾಲೆ ಹಾಗು ಕಾಲೇಜು ಅಧ್ಯಯನದ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದ ಬಗ್ಗೆ ಸ್ಪಷ್ಟವಾದ ಗುರಿಗಳನ್ನು ಹಾಕಿಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಬೇಕು. ಈ ಹಂತದಲ್ಲಿ ಮಾದಕವಸ್ತು ವ್ಯಸನ ರೂಢಿಸಿಕೊಂಡರೆ ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಮಾದಕವಸ್ತು ವ್ಯಸನ ಕ್ಷಣಿಕ ಸುಖ ನೀಡಿದರು ಆರೋಗ್ಯದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ, ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ, ಯುವಶಕ್ತಿ ರಾಷ್ಟ್ರದ ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಮಾದಕವಸ್ತು ವ್ಯಸನದಿಂದ ದೂರವಿದ್ದು, ತಮ್ಮ ಗಮನವನ್ನು ಅಧ್ಯಯನದ ಮೇಲೆ ಕೇಂದ್ರೀಕರಿಸಿ, ತಮ್ಮ ಜ್ಞಾನ ಹಾಗು ಕೌಶಲ್ಯವನ್ನು ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ತರಲು ಬಳಸಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾದಕವಸ್ತು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲು ಪ್ರತಿಜ್ಞೆ ಕೈಗೊಂಡರು. ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಜಂಟಿ ಆಡಳಿತಾಧಿಕಾರಿ ಸೌಮ್ಯ ಪ್ರಭಾಕರ ಬೀರಯ್ಯ ಪ್ರತಿಜ್ಞಾವಿಧಿ ಬೋಧಿಸಿದರು. ಅಭಿಯಾನದ ಅಂಗವಾಗಿ ಮಾದಕವಸ್ತು ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ಸಂದೇಶವುಳ್ಳ ನಾಟಕವನ್ನು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಎಲ್‌ಈಡಿ ಪರದೆಯಲ್ಲಿ ವೀಕ್ಷಿಸಿದರು.
