ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೫ನೇ ಆರಾಧನಾ ಮಹೋತ್ಸವ : ಉತ್ಸವ ಮೆರವಣಿಗೆ



ಭದ್ರಾವತಿ ನಗರದ ವಿವಿಧೆಡೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೫ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಸೋಮವಾರ ಹಳೇನಗರದ ಶ್ರೀ ವೀರಾಂಜನೇಯ, ಶ್ರೀ ವಾದಿರಾಜ ಗುರುಸಾರ್ವಭೌಮರ ಹಾಗು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮಠದಲ್ಲಿ ರಾಯರ ಉತ್ಸವ ಮೆರವಣಿಗೆ ನಡೆಸಲಾಯಿತು. 
    ಭದ್ರಾವತಿ: ನಗರದ ವಿವಿಧೆಡೆ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ೩೫೫ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಸೋಮವಾರ ರಾಯರ ಉತ್ಸವ ಮೆರವಣಿಗೆ ನಡೆಸಲಾಯಿತು. 
ಆರಾಧನಾ ಮಹೋತ್ಸವ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ದರ್ಶನ ಪಡೆಯಲು ನಗರದ ವಿವಿಧೆಡೆ ಮಠಗಳಿಗೆ ಸಹಸ್ರಾರು ಭಕ್ತರು ಧಾವಿಸುತ್ತಿದ್ದು, ಹಳೇನಗರದ ಶ್ರೀ ವೀರಾಂಜನೇಯ, ಶ್ರೀ ವಾದಿರಾಜ ಗುರುಸಾರ್ವಭೌಮರ ಹಾಗು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಮಠದಲ್ಲಿ ಬೆಳಿಗ್ಗೆಯಿಂದಲೇ ವಿವಿಧ ಧಾರ್ಮಿಕ ಆಚರಣೆಗಳು ಜರುಗಿದವು. ರಾಯರ ಬೃಂದಾವನಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ಮಠದಿಂದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದವರೆಗೂ ಅಲಂಕೃತಗೊಂಡ ರಥದಲ್ಲಿ ರಾಯರ ಉತ್ಸವ ಮೆರವಣಿಗೆ ನಡೆಸಲಾಯಿತು.


    ಉತ್ಸವ ಮೆರವಣಿಗೆ ಆರಂಭಗೊಳ್ಳುತ್ತಿದ್ದಂತೆ ಭಕ್ತರು ರಾಯರಿಗೆ ಜಯಘೋಷಗಳನ್ನು ಹಾಕಿದರು. ಚಂಡೆ ವಾದ್ಯದೊಂದಿಗೆ ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಅಲ್ಲದೆ ಮಠದ ಪ್ರಾಂಗಣದಲ್ಲಿ ಭಕ್ತರು ಮಂಗಳ ವಾದ್ಯ ಮತ್ತು ಚಂಡೆ ವಾದ್ಯ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸುವ ಮೂಲಕ ಭಕ್ತಿ ಸಮರ್ಪಿಸಿದರು.  
    ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಮಧ್ಯಾಹ್ನಸಹಸ್ರಾರು ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಶ್ರೀ ಗುರುರಾಜ ಸೇವಾ ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು, ಅರ್ಚಕ ವೃಂದದವರು ಉಪಸ್ಥಿತರಿದ್ದರು.