ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮಾಸದ ನೆನಪು
ಪುನಃ ಕುಟುಂಬಕ್ಕೆ ಉಕ್ಕಿನ ನಗರ ಒಲಿಯುವುದೇ ?
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ
ಮುಖ್ಯಾಂಶಗಳು:
- ೩ ಬಾರಿ ಕ್ಷೇತ್ರದ ಶಾಸಕರಾಗಿದ್ದ ಎಂ.ಜೆ ಅಪ್ಪಾಜಿ.
- ಕಣ್ಮರೆಯಾಗಿ ೬ ವರ್ಷಗಳು ಕಳೆದರೂ ಮಾಸದ ನೆನಪು
- ಅಲ್ಪ ಮತಗಳ ಹಿನ್ನಡೆ ಅನುಭವಿಸಿದ ಪತ್ನಿ
- ಮುಂಬರುವ ಚುನಾವಣೆಯಲ್ಲಿ ಅದೃಷ್ಟ ಯಾರಿಗೆ?
- ಎರಡು ಕುಟುಂಬಗಳ ಪುತ್ರರ ನಡುವೆ ಪೈಪೋಟಿ ನಡೆಯುವುದೇ?
* ಅನಂತಕುಮಾರ್
ಭದ್ರಾವತಿ: ಕ್ಷೇತ್ರದ ೩ ದಶಕಗಳ ರಾಜಕೀಯ ಕೊಂಡಿಯೊಂದು ಕಳಚಿ ಹೋಗಿ ಇದೀಗ ೬ ವರ್ಷ ಕಳೆದಿದ್ದು, ಆದರೂ ಸಹ ಜನಮಾನಸದಲ್ಲಿ ಮಾಜಿ ಶಾಸಕ ಎಂ.ಜಿ ಅಪ್ಪಾಜಿ ಅಚ್ಚಳಿಯದಂತೆ ಉಳಿದುಕೊಂಡಿದ್ದಾರೆ. ಸೆ.೨, ೨೦೨೦ರಂದು ನಡುರಾತ್ರಿ ಅಪ್ಪಾಜಿ ಇಹಲೋಕ ತ್ಯಜಿಸುತ್ತಾರೆಂಬ ಕನಸು ಸಹ ಯಾರಿಗೂ ಇರಲಿಲ್ಲ. ಅವರ ನಿಧನದ ಸುದ್ದಿ ಕ್ಷೇತ್ರದ ಜನತೆಯನ್ನು ಒಮ್ಮೆ ತಲ್ಲಣಗೊಳಿಸಿತ್ತು.
ಕೇಂದ್ರ ಉಕ್ಕು ಪ್ರಾಧಿಕಾರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಸಾಮಾನ್ಯ ಕಾರ್ಮಿಕನಾಗಿ ೨೦ ರು. ಸಂಬಳಕ್ಕೆ ದುಡಿಯುತ್ತಿದ್ದ ಅಪ್ಪಾಜಿ ಆರಂಭದಲ್ಲಿ ಕಾರ್ಮಿಕ ಹೋರಾಟಗಾರನಾಗಿ ಗುರುತಿಸಿ ಕೊಂಡಿದ್ದರು. ತಿಂಗಳ ಸಂಬಳದಲ್ಲಿ ಜೀವನ ನಡೆಸುವುದೇ ಕಷ್ಟವಿರುವ ಸಂದರ್ಭದಲ್ಲಿ ಜನರು ನೀಡಿದ ದೇಣಿಗೆ ಹಣದಿಂದಲೇ ಚುನಾವಣೆಗೆ ಸ್ಪರ್ಧಿಸುವ ಮೂಲಕ ರಾಜಕೀಯ ಅಸ್ತಿತ್ವ ಕಂಡುಕೊಂಡರು. ನಂತರ ಅವರು ೩ ಬಾರಿ ಶಾಸಕರಾದರೂ ಸಾಮಾನ್ಯರಂತೆ ಬದುಕಿ ಕ್ಷೇತ್ರದ ಜನರೊಂದಿಗೆ ಗುರುತಿಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ.
ಅಧಿಕಾರ ಇರಲಿ, ಇಲ್ಲದಿರಲಿ ಕ್ಷೇತ್ರದಲ್ಲಿ ಅಪ್ಪಾಜಿ ತಮ್ಮದೇ ಆದ ವರ್ಚಸ್ಸು, ಮತ ಬ್ಯಾಂಕ್ ಹೊಂದಿದ್ದರು. ಈ ನಡುವೆ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ಹಲವು ಮುಖಂಡರು ರಾಜಕೀಯವಾಗಿ ಮುಂಚೂಣಿಗೆ ಬರಲು ಕಾರಣಕರ್ತರಾಗಿದ್ದರು. ಇದೀಗ ಅಪ್ಪಾಜಿ ಇಲ್ಲದೆ ೬ ವರ್ಷ ಕಳೆದಿದ್ದು, ಈ ನಡುವೆ ಅವರ ನಿಧನದ ನಂತರ ಎದುರಾಗಿದ್ದ ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಗಳಲ್ಲಿ ಅವರ ಹಿಂಬಾಲಕರು ಸ್ವಲ್ಪ ಮಟ್ಟಿಗೆ ಹಿನ್ನಡೆ ಎದುರಿಸಿದ್ದರು. ಇನ್ನೇನು ಕೆಲವೇ ತಿಂಗಳಲ್ಲಿ ಪುನಃ ಗ್ರಾಮ ಪಂಚಾಯಿತಿ, ನಗರಸಭೆ ಚುನಾವಣೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಸರ್ಕಾರ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದು, ಈ ಹಿನ್ನಲೆಯಲ್ಲಿ ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಮೇಲೆ ಎಲ್ಲಾ ರಾಜಕೀಯ ಪಕ್ಷಗಳು ಕಣ್ಣಿಟ್ಟಿವೆ.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಪ್ಪಾಜಿಯವರ ಧರ್ಮಪತ್ನಿ ಶಾರದ ಅಪ್ಪಾಜಿಯವರು ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಅಲ್ಪಮತಗಳ ನಂತರದ ಹಿನ್ನಡೆ ಅನುಭವಿಸಿದ್ದಾರೆ. ಈ ನಡುವೆಯೂ ಎದೆಗುಂದಿದೆ ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಕ್ಷೇತ್ರದಾದ್ಯಂತ ಸಂಚರಿಸುವ ಮೂಲಕ ಮತದಾರರನ್ನು ಸಂಪರ್ಕಿಸುತ್ತಿದ್ದಾರೆ. ಅಪ್ಪಾಜಿಯವರ ವರ್ಚಸ್ಸು ಹಾಗು ತಮ್ಮ ಪ್ರಭಾವ ಬಳಸಿ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ಪೂರ್ಣ ಗುರಿ ಸಾಧಿಸುವ ವಿಶ್ವಾಸ ಹೆಚ್ಚಿಸಿಕೊಂಡಿರುವುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ ಎಂಬುದು ಅಪ್ಪಾಜಿ ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿದೆ.
ಮುಂಬರುವ ಚುನಾವಣೆಯಲ್ಲಿ ಪುತ್ರರರ ನಡುವೆ ಹೋರಾಟವೇ? :
ಈಗಾಗಲೇ ಕ್ಷೇತ್ರದಲ್ಲಿ ೪ ಬಾರಿ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ್‌ರವರು ತಮ್ಮ ಸ್ಥಾನವನ್ನು ಪುತ್ರ ಬಿ.ಎಸ್ ಗಣೇಶ್ ಅವರಿಗೆ ಬಿಟ್ಟುಕೊಡಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಕ್ಷೇತ್ರದಾದ್ಯಂತ ಗಣೇಶ್ ಪರವಾಗಿ ವ್ಯಾಪಕ ಪ್ರಚಾರ ನಡೆಸಲಾಗುತ್ತಿದ್ದು, ಗಣೇಶ್ ತಮ್ಮ ತಂದೆಯ ಸ್ಥಾನವನ್ನು ಉಳಿಸಿಕೊಳ್ಳಲು ನಿರಂತರವಾಗಿ ಕ್ಷೇತ್ರದ ಜನರ ಸಂಪರ್ಕ ಬೆಳೆಸಿಕೊಳ್ಳುತ್ತಿದ್ದಾರೆ. ಸಭೆ, ಸಮಾರಂಭಗಳನ್ನು ಆಯೋಜನೆ ಮಾಡಿ ಮತಯಾಚುತ್ತಿದ್ದಾರೆ. ಅಲ್ಲದೆ ತಂದೆಯವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿವಹಿಸುತ್ತಿದ್ದಾರೆ. ಮತ್ತೊಂದೆಡೆ ಅಪ್ಪಾಜಿಯವರ ಕುಟುಂಬದ ಸ್ಪರ್ಧೆ ಇನ್ನೂ ಅಧಿಕೃತವಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಪುನಃ ಶಾರದ ಅಪ್ಪಾಜಿ ಸ್ಪರ್ಧಿಸುವರೇ ಅಥವಾ ಅವರ ಪುತ್ರ ಎಂ.ಎ ಅಜಿತ್ ಸ್ಪರ್ಧಿಸುವರೇ ಎಂಬುದು ಸ್ಪಷ್ಟಪಡಿಸಬೇಕಾಗಿದೆ. ಆದರೆ ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಬಿ.ಎಸ್ ಗಣೇಶ್ ಮತ್ತು ಎಂ.ಎ ಅಜಿತ್ ನಡುವೆ ಸ್ಪರ್ಧೆ ಎಂದು ಬಿಂಬಿಸಲಾಗುತ್ತಿದೆ. ಈ ಗೊಂದಲಗಳ ನಡುವೆಯೂ ಯಾವುದೇ ಕಾರಣಕ್ಕೂ ಅಪ್ಪಾಜಿ ಅವರ ವರ್ಚಸ್ಸಿನ ಮತಗಳು ಛಿದ್ರವಾಗದಂತೆ ಹಾಗು ಹೊಸ ಮತದಾರರನ್ನು ಸೆಳೆಯಲು ನಾನಾ ರೀತಿಯ ತಂತ್ರಗಾರಿಕೆಗಳಿಗೆ ಮೊರೆ ಹೋಗಲಾಗುತ್ತಿದೆ. ಈ ನಡುವೆ ಎದುರಾಗಿರುವ ಅಪ್ಪಾಜಿಯವರ ೬ನೇ ವರ್ಷದ ನೆನಪು ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಚೈತನ್ಯವನ್ನುಂಟು ಮಾಡಿದೆ.
೬ನೇ ವರ್ಷದ ಪುಣ್ಯಸ್ಮರಣೆ :
ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಮುಂಭಾಗದ ಪೆಟ್ರೋಲ್ ಬಂಕ್‌ನಲ್ಲಿ ಸೆ.೨ರ ಬುಧವಾರ ಅಪ್ಪಾಜಿಯವರ ೬ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಅಭಿಮಾನಿ ಬಳಗದಿಂದ ಆಯೋಜಿಸಲಾಗಿದೆ.
ಅಪ್ಪಾಜಿ ಅಭಿಮಾನಿಗಳು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಕ್ಷೇತ್ರದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳಳುವಂತೆ ಕೋರಲಾಗಿದೆ.

