ಯುವ ಸಮುದಾಯ ಮುಂದಿನ ಭವಿಷ್ಯಕ್ಕೆ ಜನಪದ ಕಲೆಗಳನ್ನು ಕೊಂಡೊಯ್ಯುವ ಜವಾಬ್ದಾರಿ ಹೊಂದಲಿ : ಎಚ್. ತಿಮ್ಮಪ್ಪ
ಭದ್ರಾವತಿ ತಾಲೂಕಿನ ಹಳ್ಳಿಕೆರೆ ಗ್ರಾಮದ ಸಂತ ಡೋಮಿನಿಕ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ವಿಶೇಷ ಘಟಕ ಧನ ಸಹಾಯ ಯೋಜನೆಯಡಿಯಲ್ಲಿ ನಗರದ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಆಯೋಜಿಸಲಾಗಿದ್ದ ``ಜಾನಪದ ಕಲರವ'' ರಘುಕುಮಾರ್ ಮತ್ತು ತಂಡ, ಎಮ್ಮೆಹಟ್ಟಿ ಇವರಿಂದ ಡೊಳ್ಳು ಕುಣಿತ ಪ್ರದರ್ಶನ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಉದ್ಘಾಟಿಸಿದರು.
ಭದ್ರಾವತಿ : ಪ್ರಸ್ತುತ ವಿದ್ಯಾರ್ಥಿಗಳಿಗೆ ಜನಪದ ಕಲೆಗಳ ಅರಿವು ಅಗತ್ಯವಾಗಿದ್ದು, ಮುಂದಿನ ಭವಿಷ್ಯಕ್ಕೆ ಜನಪದ ಕಲೆಗಳನ್ನು ಕೊಂಡೊಯ್ಯುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್. ತಿಮ್ಮಪ್ಪ ಹೇಳಿದರು.
ಅವರು ತಾಲೂಕಿನ ಹಳ್ಳಿಕೆರೆ ಗ್ರಾಮದ ಸಂತ ಡೋಮಿನಿಕ್ ಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಇವರ ವಿಶೇಷ ಘಟಕ ಧನ ಸಹಾಯ ಯೋಜನೆಯಡಿಯಲ್ಲಿ ನಗರದ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದಿಂದ ಆಯೋಜಿಸಲಾಗಿದ್ದ ``ಜಾನಪದ ಕಲರವ'' ರಘುಕುಮಾರ್ ಮತ್ತು ತಂಡ, ಎಮ್ಮೆಹಟ್ಟಿ ಇವರಿಂದ ಡೊಳ್ಳು ಕುಣಿತ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಜನಪದ ಕಲೆಗಳು ಕಣ್ಮರೆಯಾಗುತ್ತಿದ್ದು, ಯುವ ಸಮುದಾಯ ಜನಪದ ಕಲೆಗಳ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವ ಜೊತೆಗೆ ಜನಪದ ಕಲೆಗಳನ್ನು ಮತ್ತಷ್ಟು ಬೆಳಸಬೇಕೆಂದರು.
ಜನಪದ ಕಲೆಗಳಲ್ಲಿ ಡೊಳ್ಳು ಕುಣಿತ ಹೆಚ್ಚಿನ ಮಹತ್ವ ಹೊಂದಿದ್ದು, ಯುವ ಸಮುದಾಯವನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ಈ ಹಿನ್ನಲೆಯಲ್ಲಿ ಡೊಳ್ಳು ಕುಣಿತ ಗಂಡುಕಲೆ ಎಂದೇ ಪ್ರಸಿದ್ದಿಯಾಗಿದೆ ಎಂದರು.
ಸಂತ ಡೋಮಿನಿಕ್ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೆನ್ಫಿ ಮಾತನಾಡಿ, ನಮ್ಮ ಶಾಲೆಯಲ್ಲಿ ಈ ರೀತಿಯ ಕಾರ್ಯಕ್ರಮ ಮೊದಲ ಬಾರಿಗೆ ಆಯೋಜನೆ ಮಾಡಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ. ಈ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಶಾಲೆಗಳಲ್ಲಿ ನಡೆಯಬೇಕೆಂದರು.
ಹಿರಿಯ ರಂಗ ಕಲಾವಿದರಾದ ಕೆ.ಎಸ್ ರವಿಕುಮಾರ್ , ಬಿ. ಕಮಲಾಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬೇಡ್ಕರ್ ಜಾನಪದ ಕಲಾಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಬಿ. ಪ್ರವೀಣ್ ಕುಮಾರ್ ಪ್ರಾರ್ಥಿಸಿ, ಮೋಕ್ಷ ಸ್ವಾಗತಿಸಿ, ಶಾಲಿನಿ ವಸಂತ ಕುಮಾರ್ ನಿರೂಪಿಸಿದರು.
