ದುಶ್ಚಟಗಳಿಗೆ ಬಲಿಯಾಗದೆ ವ್ಯಸನ ಮುಕ್ತ ಕ್ಷೇತ್ರವನ್ನಾಗಿಸಲು ಸಂಕಲ್ಪ ಕೈಗೊಳ್ಳಿ : ಪ್ರದೀಪ್ ದೇವಗಿರಿ
ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿಯಿಂದ ಶನಿವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೮೦ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ತಹಸೀಲ್ದಾರ್ ಪ್ರದೀಪ್ ದೇವಗಿರಿ ಧ್ವಜಾರೋಹಣ ನೆರವೇರಿಸಿ, ಶಾಸಕ ಬಿ.ಕೆ ಸಂಗಮೇಶ್ವರ್ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿದರು.
ಭದ್ರಾವತಿ: ದೇಶದ ೮೦ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪ್ರಸ್ತುತ ನಾವೆಲ್ಲರೂ ದುಶ್ಚಟಗಳಿಂದ ಮುಕ್ತರಾಗಿ ಬದುಕುತ್ತೇವೆಂಬ ದೃಢ ಸಂಕಲ್ಪ ಕೈಗೊಳ್ಳಬೇಕಾಗಿದೆ ಎಂದು ತಹಸೀಲ್ದಾರ್ ಪ್ರದೀಪ್ ದೇವಗಿರಿ ತಿಳಿಸಿದರು.
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿಯಿಂದ ಶನಿವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಆಯೋಜಿಸಲಾಗಿದ್ದ ೮೦ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಆನೇಕ ಮಹನೀಯರ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯಪಡೆದುಕೊಳ್ಳಲು ಸಾಧ್ಯವಾಹಿತು. ಸ್ವಾತಂತ್ರ್ಯದ ಮಹತ್ವ ನಾವೆಲ್ಲರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರಸ್ತುತ ದೇಶವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಯುವ ಸಮುದಾಯದವರು ದಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆ, ಮದ್ಯ ವ್ಯವಸನ ಮುಕ್ತರನ್ನಾಗಿಸುವ ಸಂಕಲ್ಪ ಕೈಗೊಳ್ಳಬೇಕಾಗಿದೆ ಎಂದರು.
ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ. ಮುಖ್ಯವಾಗಿ ಜನಪ್ರತಿನಿಧಿಗಳು ಕಾರ್ಯಾಂಗದ ಜೊತೆ ಜೊತೆಗೆ ನಡೆಯಬೇಕಾಗಿದೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಗಳ ಜೊತೆಗೆ ಒಗ್ಗಟ್ಟಾಗಿ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶಕ್ತಿ ಮೀರಿ ಶ್ರಮಿಸುವ ವಿಶ್ವಾಸವಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಇದಕ್ಕೂ ಮೊದಲು ಪಥ ಸಂಚಲನ ವಂದನೆ ಸ್ವೀಕರಿಸಿದರು. ಪೊಲೀಸ್, ಗೃಹ ರಕ್ಷಕದಳ, ನಾಗರೀಕ ಪೊಲೀಸ್ ವಿದ್ಯಾರ್ಥಿ ದಳ ಹಾಗು ವಿವಿಧ ಶಾಲಾ-ಕಾಲೇಜುಗಳ ಒಟ್ಟು ೨೨ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು.
ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಕೆ.ಎನ್ ಹೇಮಂತ್, ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆಶಾ ಲತಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
