೨ ದಿನಗಳಿಂದ ವ್ಯಾಪಕ ಮಳೆ : ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯಸ್ತ


ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಕಳೆದ ಕೆಲವು ದಿನಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಾಕಷ್ಟು ನಷ್ಟ ಉಂಟಾಗುತ್ತಿದೆ. 
    ಭದ್ರಾವತಿ: ಕ್ಷೇತ್ರದಲ್ಲಿ ಶುಕ್ರವಾರ ದಿಂದ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮಳೆಯಿಂದಾಗಿ ಜನಜೀವನ ಸ್ವಲ್ಪಮಟ್ಟಿಗೆ ಅಸ್ತವ್ಯವಸ್ತಗೊಂಡಿದೆ. 
    ಶನಿವಾರ ಸಹ ಮಳೆ ಮುಂದುವರೆದಿದ್ದು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮಳೆಯಲ್ಲಿಯೇ ತೆರಳುವಂತಾಯಿತು. ಸೊಪ್ಪು, ತರಕಾರಿ, ಹಣ್ಣು ಹಾಗು ತಿಂಡಿ ತಿನಿಸುಗಳನ್ನು ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳು ಗ್ರಾಹಕರಿಲ್ಲದೆ ಸಂಕಷ್ಟಕ್ಕೆ ಒಳಗಾಗುವಂತಾಯಿತು. ಕೆಲವು ಅಂಗಡಿಮುಗ್ಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಕೆಲವೆಡೆ ಮಣ್ಣಿನ ರಸ್ತೆಗಳು ಕೆಸರುಮಯವಾಗಿದ್ದು, ರಸ್ತೆಯಲ್ಲಿನ ಗುಂಡಿಗೊಟರುಗಳು, ಹಳ್ಳಕೊಳ್ಳಗಳು ಹಾಗು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನಿಂತು ಕೊಂಡಿದ್ದು, ಪಾದಚಾರಿಗಳು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಉಳಿದಂತೆ ಯಾವುದೇ ಹಾನಿ ಸಂಭವಿಸಿರುವುದು ತಿಳಿದು ಬಂದಿಲ್ಲ. 
    ಮಳೆ ವಿಳಂಬವಾಗಿ ಆರಂಭವಾಗಿರುವ ಹಿನ್ನಲೆಯಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಮಳೆ ಇದೆ ರೀತಿ ಮುಂದುವರೆದಲ್ಲಿ ಬೆಳೆ ಹಾನಿ ಸಂಭವಿಸುವ ಭೀತಿ ಎದುರಾಗಿದೆ.  ಮಳೆ ನಡುವೆ ಕೆಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದು,  ಸಾಕಷ್ಟು ನಷ್ಟ ಉಂಟಾಗಿದೆ.