ಕೊನೆಗೂ ಉಕ್ಕಿನ ನಗರಕ್ಕೆ ಸಚಿವ ಸ್ಥಾನ ಸಿಗಲಿಲ್ಲ
ಬಿ.ಕೆ ಸಂಗಮೇಶ್ವರ್
ಭದ್ರಾವತಿ : ವಿಧಾನಸಭಾ ಕ್ಷೇತ್ರದಿಂದ ಮುಂಬರುವ ಚುನಾವಣೆಯಲ್ಲಿ ಮಗನಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವ ಶಾಸಕ ಬಿ.ಕೆ ಸಂಗಮೇಶ್ವರ್ ಕೊನೆಯ ಘಳಿಗೆಯಲ್ಲಿ ತಮಗೆ ಸಚಿವ ಸ್ಥಾನ ಸಿಗುವ ಭರವಸೆ ಹೊಂದಿದ್ದರು. ಆದರೆ ಇದೀಗ ಮಂತ್ರಿಗಿರಿ ಇಲ್ಲದೆ ತಮ್ಮ ರಾಜಕೀಯ ಜೀವನ ಅಂತ್ಯಗೊಳಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕ್ಷೇತ್ರದಲ್ಲಿ ೪ ಬಾರಿ ಶಾಸಕರಾಗಿ ಇತಿಹಾಸ ನಿರ್ಮಿಸಿರುವ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸ ಕ್ಷೇತ್ರದ ಜನರು ಹೊಂದಿದ್ದರು. ಇದುವರೆಗೂ ಕ್ಷೇತ್ರದ ಇತಿಹಾಸದಲ್ಲಿ ಮಂತ್ರಿಗಿರಿ ಭಾಗ್ಯ ಇಲ್ಲಿನ ಜನಪ್ರತಿನಿಧಿಗಳಿಗೆ ಲಭಿಸಿಲ್ಲ. ವೈಯಕ್ತಿಕ ಕಾರಣಗಳಿಂದ ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದಿಂದ ಮಗನಿಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವ ಸಂಗಮೇಶ್ವರ್ ಕಳೆದ ಸುಮಾರು ೨ ವರ್ಷಗಳಿಂದ ನಿರಂತರವಾಗಿ ಕ್ಷೇತ್ರದಾದ್ಯಂತ ಮಗನ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜಕೀಯ ಜೀವನದ ಆರಂಭದಿಂದಲೂ ಪಕ್ಷ ನಿಷ್ಠೆಯಲ್ಲಿ ತೊಡಗಿಸಿಕೊಂಡಿರುವ ಸಂಗಮೇಶ್ವರ್ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಂಬಿಕೆ, ವಿಶ್ವಾಸ ಹೊಂದಿದ್ದರು. ಕೊನೆಯ ಘಳಿಗೆಯಲ್ಲಿ ತಮಗೆ ಮಂತ್ರಿಗಿರಿ ಭಾಗ್ಯ ಲಭಿಸುತ್ತದೆ ಎಂಬ ಆತ್ಮವಿಶ್ವಾಸ ಹೊಂದಿದ್ದರು. ಆದರೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಚಿವ ಸಂಪುಟದಲ್ಲೂ ಮಂತ್ರಿಗಿರಿ ಭಾಗ್ಯ ಇಲ್ಲದಂತಾಗಿದೆ. ಇದರಿಂದಾಗಿ ಸಂಗಮೇಶ್ವರ್ ಅಭಿಮಾನಿ ಬಳಗ ಸೇರಿದಂತೆ ಕ್ಷೇತ್ರದ ನಾಗರೀಕರಲ್ಲಿ ನಿರಾಸೆಯನ್ನುಂಟು ಮಾಡಿದೆ.
ಕಾಂಗ್ರೆಸ್‌ನಿಂದ ನಿರಂತರ ಅನ್ಯಾಯ:
ಕಾಂಗ್ರೆಸ್ ಪಕ್ಷದ ಮೇಲೆ ಹೊಂದಿರುವ ಅಪಾರವಾದ ನಿಷ್ಠೆಯೇ ಸಂಗಮೇಶ್ವರ್ ಅವರನ್ನು ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುವಂತೆ ಮಾಡುತ್ತಿದೆ ಎಂಬುದು ಸುಳ್ಳಲ್ಲ. ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರೂ ಸಹ ಮುಂದಿನ ಚುನಾವಣೆಯಲ್ಲಿ ಅವರಿಗೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡದೇ ಸಿ.ಎಂ ಇಬ್ರಾಹಿಂ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ವಿಧಾನಸಭಾ ಚುನಾವಣೆ ಮತಯಾಚನೆ ಸೇರಿದಂತೆ ಹಲವು ಸಂದರ್ಭಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಹಾಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಂಗಮೇಶ್ವರ್ ಅವರಿಗೆ ಮಂತ್ರಿಗಿರಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಭರವಸೆ ಈಡೇರಿಲ್ಲ. ಎರಡು ಬಾರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಸಂಗಮೇಶ್ವರ್ ಅವರನ್ನು ಸಮಾಧಾನಪಡಿಸಲಾಗಿತ್ತು. ಇದೀಗ ರಾಜಕೀಯ ಜೀವನದ ಅಂತಿಮ ಸಮಯದಲ್ಲೂ ಸಚಿವ ಸ್ಥಾನ ನೀಡದೆ ನಿರಂತರವಾಗಿ ಅನ್ಯಾಯಕ್ಕೆ ಒಳಗಾಗುವಂತೆ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದಿಂದ ಮೋಸ:
ಸಚಿವ ಸ್ಥಾನ ಕೈತಪ್ಪಿರುವ ಹಿನ್ನಲೆಯಲ್ಲಿ ಪತ್ರಿಕೆ ಜೊತೆ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ೪ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ೨-೩ ಬಾರಿ ಶಾಸಕರಾದವರಿಗೆ ಸಚಿವ ಸ್ಥಾನ ನೀಡಲಾಗಿದೆ. ನನಗೆ ಈ ಹಿಂದೆಯೇ ಸಚಿವ ಸ್ಥಾನ ಲಭಿಸಬೇಕಿತ್ತು. ಆದರೆ ನನಗೆ ಸಚಿವ ಸ್ಥಾನ ನೀಡದೆ ಮೋಸ ಮಾಡಲಾಯಿತು. ಈ ಹಿಂದೆ ೫೦ ಕೋ. ರು. ಅಮಿಷ ಬಂದರೂ ಸಹ ಕಾಂಗ್ರೆಸ್ ಪಕ್ಷ ಬಿಡದೆ ನಿಷ್ಟೆಯಿಂದ ಇದ್ದೇನೆ. ಈ ಬಾರಿ ಸಚಿವ ಸ್ಥಾನ ಸಿಗುವ ವಿಶ್ವಾಸವಿತ್ತು. ಆದರೆ ಈ ಬಾರಿ ಸಹ ನನಗೆ ಮೋಸಲಾಗಿದೆ. ನಾನು ಕಾಂಗ್ರೆಸ್ ಪಕ್ಷ ತೊರೆಯುವುದು ಹಾಗು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ. ಮುಂದಿನ ನಿರ್ಧಾರ ಕ್ಷೇತ್ರದ ಮತದಾರರು, ಕಾರ್ಯಕರ್ತರು ನಿರ್ಧರಿಸಲಿದ್ದಾರೆ ಎಂದರು.
