ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಅಂತಿಮಗೊಳ್ಳಲು ಪ್ರತಿಯೊಬ್ಬರ ಸಹಕಾರ ಅಗತ್ಯ : ಪ್ರದೀಪ್ ದೇವಗಿರಿ


ಭದ್ರಾವತಿಯಲ್ಲಿ ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘ ದಿಂದ ಸಾಮಾಜಿಕ ಕಳಕಳಿಯಿಂದ ಸ್ವಯಂ ಪ್ರೇರಿತವಾಗಿ ನಗರದ ರಂಗಪ್ಪ ವೃತ್ತದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮತದಾರರಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಬೀದಿನಾಟಕ ಪ್ರದರ್ಶನಕ್ಕೆ ತಹಸೀಲ್ದಾರ್ ಪ್ರದೀಪ್ ದೇವಗಿರಿ ಚಾಲನೆ ನೀಡಿದರು. 
    ಭದ್ರಾವತಿ: ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸುವ ಜೊತೆಗೆ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದೆಂಬ ಏಕೈಕ ಉದ್ದೇಶ ಹೊಂದಿದ್ದು, ಈ ಹಿನ್ನಲೆಯಲ್ಲಿ ಮತದಾರರಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕಾರ್ಯ ಅಂತಿಮಗೊಳ್ಳುವವರೆಗೂ ಪ್ರತಿಯೊಬ್ಬರು ಸಹಕಾರ ನೀಡಬೇಕೆಂದು ತಹಸೀಲ್ದಾರ್ ಪ್ರದೀಪ್ ದೇವಗಿರಿ ಮನವಿ ಮಾಡಿದರು. 
    ಜನ್ನಾಪುರ ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘ ದಿಂದ ಸಾಮಾಜಿಕ ಕಳಕಳಿಯಿಂದ ಸ್ವಯಂ ಪ್ರೇರಿತವಾಗಿ ನಗರದ ರಂಗಪ್ಪ ವೃತ್ತದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮತದಾರರಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಗೃತಿ ಬೀದಿನಾಟಕ ಪ್ರದರ್ಶನಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. 
     ಪ್ರಸ್ತುತ ಒಂದು ವೇಳೆ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ಸಹ ಯಾರು ಭಯಪಡುವ ಅಗತ್ಯವಿಲ್ಲ. ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಸಾಕಷ್ಟು ಸಮಯವಿದ್ದು, ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಮತದಾನದ ಹಕ್ಕು ಪಡೆದುಕೊಳ್ಳಬಹುದಾಗಿದೆ ಎಂದರು. 
       ಸ್ವೀಪ್ ಕಾರ್ಯಕ್ರಮದ ರಾಜ್ಯಮಟ್ಟದ ತರಬೇತುದಾರ ನವೀದ್ ಅಹಮದ್ ಪರ್ವೇಜ್ ಮಾತನಾಡಿ,  ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕೈಗೊಂಡಿದ್ದು, ಯುವ ಮತದಾರರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಅರ್ಹರೆಲ್ಲರೂ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು. ಅರ್ಹ ನಾಗರಿಕರೆಲ್ಲರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಮತ್ತು ಹಾಲಿ ಮತದಾರರ ವಿವರಗಳನ್ನು ಖಚಿತಪಡಿಸಿಕೊಳ್ಳುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು. 
    ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್, ಚುನಾವಣೆ ಶಿರಸ್ತೇದಾರ್ ಗಿರಿರಾಜ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಂಗಾನಾಯ್ಕಗೊಂದಿ ಸೇರಿದಂತೆ ಇನ್ನಿತರರು ಮಾತನಾಡಿದರು. ಡಾ.ಬಿ.ಆರ್ ಅಂಬೇಡ್ಕರ್ ಜಾನಪದ ಕಲಾಸಂಘದ ಪ್ರಧಾನ ಕಾರ್ಯದರ್ಶಿ ತಮಟೆ ಜಗದೀಶ್ ನಿರೂಪಿಸಿದರು. 
    ಮತದಾರರು ಮತಗಟ್ಟೆ ಅಧಿಕಾರಿಗಳಿಂದ ಸ್ವೀಕರಿಸಿದ ಎಸ್‌ಐಆರ್ ನಮೂನೆಗಳನ್ನು ಭರ್ತಿ ಮಾಡಿ ಕಡ್ಡಾಯವಾಗಿ ಹಿಂದಿರುಗಿಸುವ ಜೊತೆಗೆ ಸ್ವೀಕೃತಿ ಪ್ರತಿ ಪಡೆಯಬೇಕೆಂದು ಹಾಗು ಪ್ರತಿಯೊಬ್ಬ ಅರ್ಹ ಮತದಾರರು ಮತದಾನದಿಂದ ಹೊರಗುಳಿಯಬಾರದೆಂಬ ಉದ್ದೇಶ ಎಸ್‌ಐಆರ್ ಹೊಂದಿದೆ ಎಂಬುದನ್ನು ಜಾಗೃತಿ ಬೀದಿನಾಟಕ ಪ್ರದರ್ಶನದ ಮೂಲಕ ತಿಳಿಸಲಾಯಿತು. ಮಾಧವಚಾರ್ ವೃತ್ತ  ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ವೃತ್ತ ಒಟ್ಟು ಮೂರು ಸ್ಥಳಗಳಲ್ಲಿ ಜಾಗೃತಿ ಬೀದಿನಾಟಕ ಪ್ರದರ್ಶನ ನಡೆಸಲಾಯಿತು.  
    ಕಲಾವಿದರಾದ ಕೆ.ಎಸ್ ರವಿಕುಮಾರ್, ತಮಟೆ ಜಗದೀಶ್, ಎನ್. ಕದರಿ ನರಸಿಂಹಯ್ಯ, ಟಿ. ರಘುನಾಯ್ಕ, ಬಿ. ಚಿದಾನಂದ,  ಮನೋಹರ, ಸುನೀತಬಾಯಿ ಮತ್ತು ಜಿ. ರವಿಕುಮಾರ್ ಜಾಗೃತಿ ಬೀದಿ ನಾಟಕ ಪ್ರದರ್ಶನದಲ್ಲಿ ಅಭಿನಯಿಸಿದ್ದರು.