ಎಸ್ಐಆರ್ ಪ್ರಕ್ರಿಯೆ : 4929 ಮತದಾರರಿಗೆ ನೋಟಿಸ್, 1 ಬಾಕಿ
ಮತದಾರರ ಗುರುತಿನ ಸಂಖ್ಯೆ ಮೂಲಕ ಕರಡುಪಟ್ಟಿಯಲ್ಲಿ ಹೆಸರು ಪರಿಶೀಲಿಸಿ
ಡಾ. ಮೈತ್ರಿ ಎಚ್.ಪಿ.ಎಸ್
ಭದ್ರಾವತಿ : ತಾಲೂಕಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್ಐಆರ್) ಕಾರ್ಯ ಮುಂದುವರೆದಿದ್ದು, 4,929 ಮತದಾರರಿಗೆ ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ವಿಚಾರಣೆಯನ್ನು ಅ.9ರವರೆಗೆ ಮತದಾರರ ನೋಂದಣಿ ಅಧಿಕಾರಿಗಳು ಅಥವಾ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿಂದ ನಡೆಸಲಾಗುತ್ತದೆ ಎಂದು ಮತದಾರರ ನೊಂದಣಾಧಿಕಾರಿಯಾಗಿರುವ ನೂತನ ಉಪವಿಭಾಗಾಧಿಕಾರಿ ಡಾ. ಮೈತ್ರಿ ಎಚ್.ಪಿ.ಎಸ್ ತಿಳಿಸಿದರು.
ಅವರು ಈ ಕುರಿತು ತಾಲೂಕು ಕಛೇರಿ ಸಭಾಂಗಣದಲ್ಲಿ ಮಾಹಿತಿ ನೀಡಿ, 112- ವಿಧಾನಸಭಾ ಕ್ಷೇತ್ರ ಭದ್ರಾವತಿ ತಾಲೂಕಿನಲ್ಲಿ ಒಟ್ಟು ಮತದಾರರ ಸಂಖ್ಯೆ 1,74,332 ಇದ್ದು, 84,755 ಪುರುಷರು, 89,573 ಮಹಿಳೆಯರು ಹಾಗೂ 4 ಇತರೆ ಮತದಾರರು ಇದ್ದಾರೆ. ಎಸ್‌ಐಆರ್ ನಮೂನೆಯಲ್ಲಿ ಸೂಕ್ತ ಮಾಹಿತಿ ನೀಡದೆ ಅಥವಾ ಪೂರ್ಣ ಮಾಹಿತಿ ಸಲ್ಲಿಸದ ಹಿನ್ನಲೆಯಲ್ಲಿ ಮ್ಯಾಪಿಂಗ್ ನಡೆಸದ 3,1754 ಹಾಗು ಯಾವುದಕ್ಕೂ ಹೋಲಿಕೆಯಾಗದ (ಅನೋಮಲಿಯಸ್) 1,756 ಒಟ್ಟು 4,930 ಮತದಾರರಿಗೆ ನೋಟಿಸ್ ಕಳುಹಿಸಲು ಈ ಹಿಂದೆ ಸಿದ್ದತೆ ಕೈಗೊಳ್ಳಲಾಗಿತ್ತು. ಈಗಾಗಲೇ 4,929 ಮತದಾರರಿಗೆ ನೋಟಿಸ್ ತಲುಪಿಸಲಾಗಿದೆ. 1 ಮಾತ್ರ ಬಾಕಿ ಉಳಿದಿದ್ದು, ಕಳುಹಿಸಲಾಗಿರುವ ನೋಟಿಸ್‌ಗಳ ಪೈಕಿ 665 ಮತದಾರರ ವಿಚಾರಣೆ ಪೂರ್ಣಗೊಂಡಿದೆ. ನೋಟಿಸ್‌ಗಳ ರಚನಾ ವೇಳಾಪಟ್ಟಿಯ ಪ್ರಕಾರ, ಮೊದಲ ವಿಚಾರಣೆಯು ಸೆ.5 ರಿಂದ ಆರಂಭಗೊಂಡಿದ್ದು, ಕೊನೆಯ ವಿಚಾರಣೆ ಅ. 9ರಂದು ಮುಕ್ತಾಯಗೊಳ್ಳಲಿದೆ. ಮತದಾರರ ನೋಂದಣಿ ಅಧಿಕಾರಿಗಳು ಅಥವಾ ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳಿಂದ ವಿಚಾರಣೆ ನಡೆಸಲಾಗುತ್ತಿದೆ ಎಂದರು.
ಮತದಾರರಿಂದ ಜೂ.16 ರಿಂದ ಸೆ.9ರವರೆಗೆ ( ಫಾರಂ-6, ಫಾರಂ-6ಎ, ಫಾರಂ-7, ಮತ್ತು ಫಾರಂ-8) ನಮೂನೆಗಳನ್ನು ಸ್ವೀಕರಿಸಲಾಗಿದೆ. 1 ಎ.ಇ.ಆರ್.ಓ ಮತ್ತು ಹೆಚ್ಚುವರಿ 42 ಎ.ಇ.ಆರ್.ಓ ಗಳನ್ನುನೇಮಕಗೊಳಿಸಲಾಗಿದ್ದು, ನೋಟಿಸ್ ಹಂತದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತದಾರರ ನೋಂದಣಿಗಾಗಿ ಎರಡನೇ ಹಂತದ ವಿಶೇಷ ಅಭಿಯಾನ ಸೆ. 19 ಮತ್ತು 20 ರಂದು ಭಾರತದ ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ ನಡೆಸಲಾಗುತ್ತಿದೆ. ಮತಗಟ್ಟೆಗಳ ತಾರ್ಕಿಕೀಕರಣದ ನಂತರ ಒಟ್ಟು 7 ಹೊಸ ಬಿಎಲ್ಓ ಗಳವರನ್ನು ನೇಮಕ ಮಾಡಲಾಗಿದ್ದು, ಅವರ ಲಾಗಿನ್‌ಗಳನ್ನು ಬಿಎಲ್ಓ ಅಪ್ ನಲ್ಲಿ ರಚಿಸಲಾಗಿದೆ ಎಂದರು.
ಹಿಂದೆ ನೋಂದಾಯಿಸಿಕೊಂಡಿದ್ದ ಅದೇ ಭಾಗದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ಹಲವು ಮತದಾರರಿಂದ ಪ್ರಶ್ನೆಗಳು ಬಂದಿವೆ. ಮತಗಟ್ಟೆಗಳ ತಾರ್ಕಿಕೀಕರಣ ಮತ್ತು ಮತದಾರರ ಕ್ರಮಾಂಕದ ಮರುಹೊಂದಿಕೆ ಕಾರಣದಿಂದ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆ ಬದಲಾಗಿರಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಹಿಂದಿನ ಭಾಗಗಳಲ್ಲಿ ತಮ್ಮ ಹೆಸರುಗಳನ್ನು ಕಂಡುಹಿಡಿಯಲು ಸಾಧ್ಯವಾಗದ ಮತದಾರರು ತಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆ(ಎಫಿಕ್ ಸಂಖ್ಯೆ)ಯನ್ನು ಬಳಸಿ voters.eci.gov.in ನಲ್ಲಿ ಅಥವಾ ಇಸಿಐನೆಟ್ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಹೆಸರನ್ನು ಹುಡುಕುವಂತೆ ಕೋರಿದರು.
