ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಅಭಿವೃದ್ಧಿಗಾಗಿ ಸೆ.೧೫ರಂದು `ಶಿವಮೊಗ್ಗದಿಂದ ಬೆಂಗಳೂರಿಗೆ ಪಾದಯಾತ್ರೆ'


ಭದ್ರಾವತಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಮಾತನಾಡಿದರು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಅಭಿವೃದ್ಧಿಪಡಿಸಲು ಆಗ್ರಹಿಸಿ ಮತ್ತು ಅನ್ನದಾತ ರೈತರ ಹಾಗು ಶ್ರಮಜೀವಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸೆ.೧೫ರಂದು ಜಿಲ್ಲಾಧಿಕಾರಿ ಕಛೇರಿಯಿಂದ ಬೆಂಗಳೂರು ವಿಧಾನಸೌಧದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು ತಿಳಿಸಿದರು. 
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಾರತರತ್ನ, ಶ್ರೇಷ್ಠ ತಂತ್ರಜ್ಞ ಸರ್.ಎಂ ವಿಶ್ವೇಶ್ವರಾಯ ಹಾಗು ಸರ್ ಮಿರ್ಜಾ ಇಸ್ಮಾಯಿಲ್‌ರವರ ದೂರದೃಷ್ಟಿ ಫಲವಾಗಿ ಕ್ಷೇತ್ರವೂ ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತಹ, ಸಾವಿರಾರು ಕಾರ್ಮಿಕರು ಹಾಗು ಕುಟುಂಬಗಳಿಗೆ ಆಶ್ರಯದಾತವಾಗುವಂತಹ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಬೃಹತ್ ಕಾರ್ಖಾನೆಗಳನ್ನು ಸ್ಥಾಪಿಸುವಲ್ಲಿ ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಶ್ರಮ ಹೆಚ್ಚಿನದ್ದಾಗಿದೆ.  ಕಾರ್ಖಾನೆಗಳಿಗೆ ಅಗತ್ಯವಿರುವ ಸಾವಿರಾರು ಏಕರೆ ಜಮೀನನ್ನು ಉಚಿತವಾಗಿ ನೀಡಿ, ಭದ್ರಾ ಜಲಾಶಯ ನಿರ್ಮಿಸಿ ನೀರಿಗೆ ಕೊರತೆಯಾಗದಂತೆ ಮುಂದಿನ ಪೀಳಿಗೆಯವರಿಗೆ ಕೊಡುಗೆಯಾಗಿ ನೀಡಿದ್ದರು. ನಂತರದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಡಳಿತ  ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಗೊಳಿಸದೆ ಹಂತ ಹಂತವಾಗಿ ಹಾಳು ಮಾಡಿರುವುದನ್ನು ಸಮಿತಿ ತೀವ್ರ ಖಂಡಿಸುತ್ತದೆ ಎಂದರು. 
    ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವುದಾಗಿ ಪದೇ ಪದೇ ಪ್ರಚಾರಕ್ಕಾಗಿ ಬಳಸಿಕೊಂಡು ನಿರ್ಲಕ್ಷ್ಯ  ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ.  ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿರವರು ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಅಭಿವೃದ್ಧಿಗೊಳಿಸುವುದಾಗಿ ಭರವಸೆ ನೀಡಿದ್ದು, ಆದರೆ ಇದುವರೆಗೂ ಕಾರ್ಯಗತವಾಗಿಲ್ಲ. ಕಾರ್ಖಾನೆ ಅಭಿವೃದ್ಧಿಗೆ ಇದುವರೆಗೂ ಬಿಡಿಗಾಸು ಸಹ ಬಿಡುಗಡೆಯಾಗದಿರುವುದು ವಿಪರ್ಯಾಸದ ಸಂಗತಿಯಾಗಿ ಎಂದರು. 
    ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳನ್ನು ಅಭಿವೃದ್ಧಿಗೊಳಿಸುವುದಾಗಿ ರಾಜ್ಯ ಸರ್ಕಾರ ಸಹ ಭರವಸೆ ನೀಡುತ್ತಿದೆ. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು  ಇಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನರಿಗೆ ಈ ಎರಡು ಕಾರ್ಖಾನೆಗಳನ್ನು ಪುನರ್ ಸ್ಥಾಪನೆ ಮಾಡುವ ಬಗ್ಗೆ ಆಶ್ವಾಸನೆ ನೀಡಿದ್ದು, ಇಲ್ಲಿಯವರೆಗೂ ಕಾರ್ಖಾನೆಯ ಬಗ್ಗೆ ಕಾಳಜಿ ವಹಿಸದಿರುವುದು ಶೋಚನೀಯ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 
    ಹಲವಾರು ವರ್ಷಗಳಿಂದ ಸಮಿತಿಯು ನಿರಂತರವಾಗಿ ಕಾರ್ಖಾನೆಗಳ ಅಭಿವೃದ್ಧಿಗೆ ಹಲವು ಕ್ರಾಂತಿಕಾರಿ ಹೋರಾಟಗಳನ್ನು ನಡೆಸಿಕೊಂಡುಬಂದಿದೆ. ಇದೀಗ ಸೆ. ೧೫ರಂದು ಸರ್ ಎಂ. ವಿಶ್ವೇಶ್ವರಾಯರವರ ಜನ್ಮದಿನಾಚರಣೆ ಪ್ರಯುಕ್ತ  ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯಿಂದ ಬೆಂಗಳೂರು ವಿಧಾನಸೌಧದವರೆಗೂ ನ್ಯಾಯಕ್ಕಾಗಿ ಪಾದಯಾತ್ರೆ ನಡೆಸಲಾಗುತ್ತಿದೆ.  ಪಾದಯಾತ್ರೆ ಹೋರಾಟದಲ್ಲಿ ಕ್ಷೇತ್ರದ ಎಲ್ಲಾ ನಾಗರೀಕರು, ರೈತರು, ಕೂಲಿಕಾರ್ಮಿಕರು, ಆಟೋ ಟ್ಯಾಕ್ಸಿ ಚಾಲಕರು, ಬೀದಿ ವ್ಯಾಪಾರಿಗಳು, ವರ್ತಕರು, ಮಹಿಳೆಯರು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ನಿವೃತ್ತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿಕೊಡಬೇಕೆಂದು ಕೋರಿದರು.  
    ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಅಕ್ರಮ್ ಖಾನ್, ಸೋಮಣ್ಣ, ಶ್ರೀನಿವಾಸ್, ಏಕಾಂತಪ್ಪ ಮತ್ತು ರಾಜಪ್ಪ ಉಪಸ್ಥಿತರಿದ್ದರು.