ಎಂಪಿಎಂ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಎಚ್‌ಪಿಸಿಎಲ್‌ಗೆ ವಹಿಸಿಕೊಟ್ಟು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ

ಹೆಗಡೆ, ಅರಸು ಜನ್ಮದಿನಾಚರಣೆ, ಸ್ವಚ್ಛತಾ ಕಾರ್ಯ, ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಆರ್. ವೇಣುಗೋಪಾಲ್


ಭದ್ರಾವತಿ ನಗರಸಭೆ ವಾರ್ಡ್ ನಂ.೨೯ರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯ ೩ನೇ ಕ್ರಾಸ್‌ನಲ್ಲಿರುವ ಉದ್ಯಾನವನದಲ್ಲಿ ಭಾನುವಾರ ಶ್ರೀ ಡಿ. ದೇವರಾಜ ಅರಸ್ ಅಮಹಿಂದ(ಅಲ್ಪಸಂಖ್ಯಾತ, ಮಹಿಳಾ, ಹಿಂದುಳಿದ ಮತ್ತು ದಲಿತ ವರ್ಗಗಳು) ಮತ್ತು ಶೋಷಿತ ವರ್ಗಗಳ ಒಕ್ಕೂಟದ ಉದ್ಘಾಟನೆ, ಸ್ವಚ್ಛತಾ ಕಾರ್ಯ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
    ಭದ್ರಾವತಿ : ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಿಂದೂಸ್ತಾನ್ ಪೇಪರ್ ಕಾರ್ಪೋರೇಷನ್ ಲಿಮಿಟೆಡ್(ಎಚ್‌ಪಿಸಿಎಲ್)ಗೆ ವಹಿಸುವಂತೆ ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಶ್ರೀ ಡಿ. ದೇವರಾಜ ಅರಸ್ ಅಮಹಿಂದ ಮತ್ತು ಶೋಷಿತ ವರ್ಗಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಆರ್. ವೇಣುಗೋಪಾಲ್ ಒತ್ತಾಯಿಸಿದ್ದಾರೆ. 
    ಅವರು ಭಾನುವಾರ ನಗರಸಭೆ ವಾರ್ಡ್ ನಂ.೨೯ರ ಕಿತ್ತೂರು ರಾಣಿ ಚನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್)ಯ ೩ನೇ ಕ್ರಾಸ್‌ನಲ್ಲಿರುವ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಡಿ. ದೇವರಾಜ ಅರಸ್ ಅಮಹಿಂದ(ಅಲ್ಪಸಂಖ್ಯಾತ, ಮಹಿಳಾ, ಹಿಂದುಳಿದ ಮತ್ತು ದಲಿತ ವರ್ಗಗಳು) ಮತ್ತು ಶೋಷಿತ ವರ್ಗಗಳ ಒಕ್ಕೂಟದ ಉದ್ಘಾಟನೆ, ಸ್ವಚ್ಛತಾ ಕಾರ್ಯ, ಮಾಜಿ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸು ಹಾಗು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಮತ್ತು ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು. 
    ರಾಜ್ಯ ಸರ್ಕಾರಕ್ಕೆ ಇದುವರೆಗೂ ಎಂಪಿಎಂ ಕಾರ್ಖಾನೆಯನ್ನು ಸರ್ಕಾರದ ಅನುದಾನದಲ್ಲಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರು ಚುನಾವಣೆ ಸಂದರ್ಭದಲ್ಲಿ ಎಂಪಿಎಂ ಕಾರ್ಖಾನೆ ಅಭಿವೃದ್ಧಿಪಡಿಸುವುದಾಗಿ ಕ್ಷೇತ್ರದ ಜನರಿಗೆ ಆಶ್ವಾಸನೆ ನೀಡಿದ್ದು, ಅದರಂತೆ ಕಾರ್ಖಾನೆ ಅಭಿವೃದ್ಧಿಗೆ ಮುಂದಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತಾವು ಅವರೊಂದಿಗೆ ಹಾಗು ಮಾಜಿ ಮುಖ್ಯಮಂತ್ರಿ, ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಎಂಪಿಎಂ ಕಾರ್ಖಾನೆಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಿಂದೂಸ್ತಾನ್ ಪೇಪರ್ ಕಾರ್ಪೋರೇಷನ್ ಲಿಮಿಟೆಡ್‌ಗೆ ವಹಿಸಿಕೊಡಲು ಮುಂದಾಗಬೇಕು. ಆ ಮೂಲಕ ನಗರದ ನಿರುದ್ಯೋಗಿ ಯುವ ಸಮುದಾಯಕ್ಕೆ ಅನುಕೂಲ ಕಲ್ಪಿಸಿಕೊಟ್ಟು ನಗರ ಅಭಿವೃದ್ಧಿ ಹೊಂದಲು ನೆರವಾಗಬೇಕೆಂದು ಒತ್ತಾಯಿಸಿದರು.


    ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸುರವರ ಆಡಳಿತದ ಅವಧಿಯಲ್ಲಿ ೧೯೭೭ರಲ್ಲಿ ಜನ್ನಾಪುರ ಭಾಗದಲ್ಲಿ ಕೊಳವೆ ಬಾವಿಗಳು(ಬೋರ್‌ವೆಲ್‌ಗಳು) ನಿರ್ಮಾಣಗೊಂಡವು.  ಅಲ್ಲದೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಸುಮಾರು ೩೭ ಕೊಳಚೆ ಪ್ರದೇಶಗಳ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಯಿತು. ಇದೆ ರೀತಿ ಮಾಜಿ ಮೂಖ್ಯಮಂತ್ರಿ ದಿವಂಗತ ರಾಮಕೃಷ್ಣಹೆಗಡೆಯವರ ಅವಧಿಯಲ್ಲಿ ನ್ಯೂಟೌನ್ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಗಳು ರೂಪುಗೊಂಡವು. ಕೆಇಬಿ ಕೌಂಟರ್ ಹಾಗು ನಗರ ಆರೋಗ್ಯ ಕೇಂದ್ರ ನಿರ್ಮಾಣ ಮತ್ತು ೩೭ ಕೊಳಚೆ ಪ್ರದೇಶಗಳ ಘೋಷಣೆಯಿಂದ ಮೂಲಭೂತ ಸೌಲಭ್ಯಗಳು ಲಭಿಸಿದವು. ಕುವೆಂಪು ವಿಶ್ವ ವಿದ್ಯಾಲಯ ಆರಂಭಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಯಿತು ಎಂದು ಸ್ಮರಿಸಿದರು. 
    ಸ್ಥಳೀಯರು, ಹಿರಿಯ ಮುಖಂಡರಾದ ಕೆ. ಸುಬ್ರಮಣಿ ಮಾತನಾಡಿ, ಕಳೆದ ಸುಮಾರು ೨೫ ವರ್ಷಗಳಿಂದ ಉದ್ಯಾನವನವನ್ನು ಮಕ್ಕಳ ರೀತಿ ನಿರ್ವಹಣೆ ಮಾಡಿಕೊಂಡು ಬರಲಾಗಿದೆ. ಮುಂದಿನ ದಿನಗಳಲ್ಲಿ ಆಸಕ್ತರು, ಯುವ ಸಮುದಾಯದವರು ಈ ಉದ್ಯಾನವನ ನಿರ್ವಹಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು. 
    ಮುಖಂಡರಾದ ವಿಶ್ವೇಶ್ವರ ರಾವ್ ಗಾಯಕ್ವಾಡ್‌ರವರು ಉಪಸ್ಥಿತರಿದ್ದು ಮಾತನಾಡಿದರು. ಪ್ರಮುಖರಾದ ಗಿರಿನಾಯ್ಡು, ಚಂದ್ರಶೇಖರ್, ಪ್ರಸನ್ನ, ಮುರುಗನ್, ಸ್ಥಳೀಯರಾದ ಮಾರ್ಗರೇಟ್, ಜಯಕ್ಕ, ಚಾಂದು, ಉದಯಕುಮಾರ್, ನರಸಿಂಹಯ್ಯ, ಭಾಗ್ಯವತಿ, ಉಮಾ ಹಾಗು ಈ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಗರಸಭೆ ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.