ವಾಮಾಚಾರ ನಂಬಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಹಣ ಕಳೆದುಕೊಂಡಿದ್ದ ಮಹಿಳೆ

ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ವಾಪಸ್ ನೀಡಿದ ಶಿವಾಜಿ ಸರ್ಕಲ್ ಠಾಣೆ ಪೊಲೀಸರು

ಭದ್ರಾವತಿ : ಮಹಿಳೆಯೊಬ್ಬರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗು ಹಣ ಪಡೆದು ವಾಮಾಚಾರ ಪರಿಹರಿಸುವುದಾಗಿ ಹೇಳಿ ನಂಬಿಸಿ ವಂಚನೆ ಮಾಡಿದ್ದ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸುವಲ್ಲಿ ನಗರದ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

    ನಗರಸಭೆ ವ್ಯಾಪ್ತಿಯ ಗಾಂಧಿನಗರ ನಿವಾಸಿ, ಕೆಎಸ್‌ಆರ್‌ಟಿಸಿ ಕಿರಿಯ ಸಹಾಯಕಿ ಮಂಗಳ ನಾಯ್ಕ್‌ರವರು ಸೆ.೭ರಂದು ಠಾಣೆಗೆ ದೂರು ನೀಡಿದ್ದರು. ತಮಗೆ ಪರಿಚಯವಿದ್ದ ಮುರಳಿ ಹಾಗೂ ಆತನ ಸಹೋದರ ರವಿ ಎಂಬುವರು, ನಿಮ್ಮ ಮೇಲೆ ವಾಮಾಚಾರ ಪ್ರಯೋಗವಾಗಿದೆ. ಅದನ್ನು ಪರಿಹರಿಸದಿದ್ದರೆ ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ದೊಡ್ಡ ಮಟ್ಟದ ಸಮಸ್ಯೆಯಾಗಬಹುದು ಎಂದು ಭಯ ಹುಟ್ಟಿಸಿದ್ದರು. ನಂತರ ನಮ್ಮ ಮನೆಗೆ ಆಗಮಿಸಿ ವಾಮಾಚಾರ ಪರಿಹರಿಸುವುದಾಗಿ ಪೂಜೆ ನಡೆಸಿದ್ದರು. ಪೂಜೆ ಮುಗಿದ ನಂತರ ಬಂಗಾರದ ಒಡವೆ ಹಾಗು ನಗದು ಹಣ ತಮ್ಮ ಬಳಿ ನೀಡುವಂತೆ ತಿಳಿಸಿ, ಅವುಗಳನ್ನು ಮನೆಗೆ ಕೊಂಡೊಯ್ದು ವಿಶೇಷ ಪೂಜೆ ಮಾಡಿ ವಾಪಸ್ ನೀಡುವುದಾಗಿ ನಂಬಿಸಿದ್ದರು. ಈ ತಮ್ಮ ಬಳಿ ಇದ್ದ  ಸುಮಾರು ೧೯೩ ಗ್ರಾಂ ಚಿನ್ನಾಭರಣ ಹಾಗೂ ೨ ಲಕ್ಷ ರು. ನಗದು ಹಣ ನೀಡಿದ್ದು, ಆದರೆ ಪಡೆದುಕೊಂಡ ಚಿನ್ನಾಭರಣ ಮತ್ತು ನಗದು ಹಣ ವಾಪಸ್ ನೀಡದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ತಿಪ್ಲಾಪುರ ಕ್ಯಾಂಪ್ ನಿವಾಸಿ ಮುರುಳಿ ಅಲಿಯಾಸ್ ಕರಿಯಾ (೩೧) ಎಂಬಾತನನ್ನು ಬಂಧಿಸಿದ್ದಾರೆ. ಸುಮಾರು ರು. ೨೨.೫೦ ಲಕ್ಷ ಮೌಲ್ಯದ ೧೬೧ ಗ್ರಾಂ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ ವಶಪಡಿಸಿಕೊಂಡಿದ್ದಾರೆ.

    ತನಿಖೆ ವೇಳೆ ಮುರುಳಿ ಚಿನ್ನಾಭರಣದ ಕೆಲ ಭಾಗವನ್ನು ಗಿರವಿ ಅಂಗಡಿಯಲ್ಲಿ ಅಡವಿಟ್ಟಿರುವುದು ಹಾಗೂ ಮತ್ತಷ್ಟು ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಯಾಗಿ ಮಾಡಿಕೊಂಡು ಮನೆಯಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ ಎಂಬ ಮಾಹಿತಿ ಪೊಲೀಸರ ಕಾರ್ಯಾಚರಣೆಯಿಂದ  ತಿಳಿದು ಬಂದಿದೆ.

     ಪೊಲೀಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್‌ರವರ ಮೇಲ್ವಿಚಾರಣೆಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಪೊಲೀಸ್ ನಗರ ವೃತ್ತ ನಿರೀಕ್ಷಕಿ ಕೆ. ನಾಗಮ್ಮರವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಉಪ ನಿರೀಕ್ಷಕ ಎಂ.ಪಿ ಸಿದ್ದಪ್ಪ, ಸಿಬ್ಬಂದಿಗಳಾದ ಆದರ್ಶ ಶೆಟ್ಟಿ, ಮನ್ಸೂದ್ ಖಾನ್, ಆಸ್ಟೀನ್, ಬಿ.ಎನ್ ಕಾಂತರಾಜ, ಹಣಮಂತ ಅವಟಿ, ಸುನೀತಾ ಹಾಗೂ ಶ್ರೀಧರ್ ಸೇರಿದಂತೆ ಇನ್ನಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

 

ಡಿ೧೦-ಬಿಡಿವಿಟಿ

ಮುರುಳಿ

 

ಡಿ೧೦-ಬಿಡಿವಿಟಿ(ಎ)

ಪೊಲೀಸರು ವಶಪಡಿಸಿಕೊಂಡಿರುವ ಚಿನ್ನಾಭರಣ

 

 

Ananthakumara, Reporter, Kannadaprabha, NDK/31A, Near, Sri Satyasayi Baba school, Newtown, Bhadravathi:-577301(Tq) Shimoga(Dis) Mob: 9738801478 : 9482007466