ಮಿನಿಹೈಡಲ್ ಪವರ್ ಪ್ರಾಜೆಕ್ಟ್‌ಗೆ ವಿದ್ಯುತ್ ಸಂಪರ್ಕ : ಎಚ್ಚರ ವಹಿಸಲು ಸೂಚನೆ 


    ಭದ್ರಾವತಿ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಮೆಸ್ಕಾಂ ವತಿಯಿಂದ ೧೧೦/೩೩/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಭದ್ರಾವತಿಯಿಂದ ಗೊಂದಿಯ ಮಿನಿಹೈಡಲ್ ಪವರ್ ಪ್ರಾಜೆಕ್ಟ್‌ಗೆ ಸಂಪರ್ಕ ಕಲ್ಪಿಸುವ ಸಿಂಗಲ್ ಸರ್ಕ್ಯೂಟ್ ೧೨ ಕಿ.ಮೀ ಮೀಟರ್ ಉದ್ದದ, ೩೩ ಕೆ.ವಿ ವಿದ್ಯುತ್ ಮಾರ್ಗವನ್ನು ಬುಧವಾರ ವಿದ್ಯುದ್ದೀಕರಣ ಮಾಡಲಾಗಿದ್ದು, ಈ ಹಿನ್ನಲೆಯಲ್ಲಿ ಸಾರ್ವಜನಿಕರು ಎಚ್ಚರವಹಿಸುವಂತೆ ಕೋರಲಾಗಿದೆ.

    ಗೊಂದಿ, ಅರಳಿಕೊಪ್ಪ, ತಿಮ್ಲಾಪುರ, ಹಿರಿಯೂರು ಮತ್ತು ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗ ಹಾದು ಹೋಗಿರುವ ಗ್ರಾಮಗಳಲ್ಲಿ ಸಾರ್ವಜನಿಕರು ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲೀ, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ ಇತ್ಯಾದಿಗಳನ್ನು ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಎಸೆಯುವುದಾಗಲಿ ಮಾಡಬಾರದು. ಒಂದು ವೇಳೆ ಯಾರಾದರೂ ಇಂತಹ ಕೃತ್ಯಗಳನ್ನು ಎಸಗಿದ್ದಲ್ಲಿ ಉಂಟಾಗುವ ಅವಘಡಗಳಿಗೆ ಕ.ವಿ.ಪ್ರ.ನಿ.ನಿ ಅಥವಾ ಮೆಸ್ಕಾಂ ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗುವುದಿಲ್ಲ ಎಂದು ಮೆಸ್ಕಾಂ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಎಚ್ಚರಿಸಿದ್ದಾರೆ.