ಅನನ್ಯ ಶಾಲೆಯಲ್ಲಿ ಅ.೨, ೩ರಂದು ಜ್ಞಾನ ದಸರಾ


ಭದ್ರಾವತಿ : ನಾಡಹಬ್ಬ ದಸರಾ ಆಚರಣೆಯನ್ನು ಕಳೆದ ೩ ವರ್ಷಗಳಿಂದ ನಗರದ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿದ್ದು, ದಸರಾ ಆಚರಣೆ ಮಹತ್ವದ ಜೊತೆಗೆ ಮಕ್ಕಳಲ್ಲಿ ಜ್ಞಾನಾರ್ಜನೆ ತುಂಬುವ ಪ್ರಯತ್ನ ಕೈಗೊಳ್ಳಲಾಗುತ್ತಿದೆ. ಈ ಬಾರಿ ಸಹ ಅ.೨ ರಿಂದ ೩ ರಂದು ಎರಡು ದಿನಗಳ ಅನನ್ಯ ಜ್ಞಾನ ದಸರಾ ಆಯೋಜಿಸಲಾಗಿದೆ.

    ಟ್ರಸ್ಟ್ ಅಧ್ಯಕ್ಷ ಡಾ. ಕೆ. ನಾಗರಾಜ್ ಅ.೨ರ ಬೆಳಿಗ್ಗೆ ೯.೩೦ಕ್ಕೆ ಅನನ್ಯ ಜ್ಞಾನ ದಸರಾ ಉದ್ಘಾಟಿಸಲಿದ್ದು, ೧ ರಿಂದ ೪ನೇ ತರಗತಿವರೆಗಿನ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ೧೦ ರಿಂದ ೧೧.೩೦ರವರೆಗೆ `ವಸ್ತುವನ್ನು ಊಹಿಸಿ ಅದರ ಉಪಯೋಗ ತಿಳಿಯೋಣ' ವಿಷಯ ಕುರಿತು ಶಾಲಾ ಶಿಕ್ಷಕರಿಂದ ಪ್ರಾತ್ಯಕ್ಷಿಕೆ, ೧೧.೪೫ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಬೆಂಕಿ ಇಲ್ಲದೆ ಅಡುಗೆ ಮಾಡುವ ತರಬೇತಿ ಶಿಕ್ಷಕರಿಂದ ಪ್ರದರ್ಶನ ನಡೆಯಲಿದೆ.

    ೫, ೬ ಮತ್ತು ೭ನೇ ತರಗತಿಯ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ೧೦ ರಿಂದ ೧೧.೩೦ರವರೆಗೆ ಶಿವಮೊಗ್ಗ ಯೋಗ ಚಿಕಿತ್ಸಕಿ ರಾಜಶ್ರೀ ಅರ್ಚಕ ಅವರಿಂದ ಯೋಗ-ಮನಸ್ಸು ಮತ್ತು ಧ್ಯಾನ ಕುರಿತು ಪ್ರಾತ್ಯಕ್ಷಿಕೆ, ೧೧.೪೫ ರಿಂದ ೧ ಗಂಟೆವರೆಗೆ ತಾಳ್ಮೆ+ಕೌಶಲ್ಯ=ಯಶಸ್ಸು ವಿಷಯ ಕುರಿತು ಕಾರೇಹಳ್ಳಿ ಬಿಜಿಎಸ್ ಶಾಲೆ ಶಿಕ್ಷಕ ಜಿ.ಆರ್ ಸುರೇಶ್ ಉಪನ್ಯಾಸ ನೀಡಲಿದ್ದು, ವಿದ್ಯಾಸಂಸ್ಥೆಯ ಜಿ. ಸುರೇಶ್ ಕುಮಾರ್ ಉಪಸ್ಥಿತರಿರುವರು. 

    ಇದೆ ಸಮಯದಲ್ಲಿ ಮಕ್ಕಳ ಪೋಷಕರಿಗಾಗಿ  `ಆಹಾರ ಮತ್ತು ಆರೋಗ್ಯ' ವಿಷಯ ಕುರಿತು ಶಿವಮೊಗ್ಗ ಸರ್ಜಿ ಆಸ್ಪತ್ರೆ ಪೌಷ್ಠಿಕಾಂಶ ತಜ್ಞ ಪಿ. ಶ್ರೇಯಸ್ ಉಪನ್ಯಾಸ ನೀಡಲಿದ್ದು, ವಿದ್ಯಾಸಂಸ್ಥೆಯ ಸಿ.ಎನ್ ಗಿರೀಶ್ ಉಪಸ್ಥಿತರಿರುವರು. `ನನ್ನ ಆರೋಗ್ಯ-ನನ್ನ ಜವಾಬ್ದಾರಿ' ವಿಷಯ ಕುರಿತು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ವರ್ಷ ಉಪನ್ಯಾಸ ನೀಡಲಿದ್ದು, ಶಿಕ್ಷಣ ಸಂಸ್ಥೆಯ ಎಸ್. ಸಂಜಯ್ ಉಪಸ್ಥಿತರಿರುವರು.

    ಅ.೩ರ ಬೆಳಿಗ್ಗೆ ೧೦ ರಿಂದ ೧೧.೩೦ರವರೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ  `ಮೂಲಭೂತ ಗಣಿತ ಕ್ರಿಯೆಗಳ ಮೂಲಕ ಗಣಿತ ಆಟಗಳು'ಕಾರ್ಯಕ್ರಮ ನಡೆಯಲಿದ್ದು, ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್ ಉಪಸ್ಥಿತರಿರುವರು. ೧೧.೪೫ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಜಿ.ಆರ್ ದೀಪಕ್ ಅವರಿಂದ ಮ್ಯಾಜಿಕ್ ಷೋ ಮತ್ತು ಬೊಂಬೆ ಪ್ರದರ್ಶನ ನಡೆಯಲಿದ್ದು, ಟ್ರಸ್ಟ್ ಉಪಾಧ್ಯಕ್ಷ ಕೆ.ಪಿ ಹರೀಶ್ ಮತ್ತು ಶಿಕ್ಷಣ ಸಂಸ್ಥೆಯ ಎ.ಎಸ್ ಧರ್ಮಾನಂದ ಉಪಸ್ಥಿತರಿರುವರು. ಮಧ್ಯಾಹ್ನ ೨ ರಿಂದ ಸಂಜೆ ೪ರವರೆಗೆ ಮನೋರಂಜನಾ ಆಟಗಳು ನಡೆಯಲಿದ್ದು, ಶಿಕ್ಷಣ ಸಂಸ್ಥೆಯ ಬಿ.ಎಸ್ ವಿನಯ್ ಬಾಬು ಮತ್ತು ಜ್ಞಾನಪ್ರಕಾಶ್ ಉಪಸ್ಥಿತರಿರುವರು.

    ಇದೆ ದಿನ ಬೆಳಿಗ್ಗೆ ೧೧.೪೫ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ `ದೈನಂದಿನ ಜೀವನದಲ್ಲಿ ವಿಜ್ಞಾನ' ವಿಷಯ ಕುರಿತು ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ಸಂಸ್ಥೆಯ ಶೃತಿ ರಾಮಸ್ವಾಮಿ ಉಪಸ್ಥಿತರಿರುವರು. ಮಧ್ಯಾಹ್ನ ೨ ರಿಂದ ಸಂಜೆ ೪ರವರೆಗೆ ಶಾಲೆಯ ಶಿಕ್ಷಕರ ಮಾರ್ಗದರ್ಶನದಲ್ಲಿ `ವಿಜ್ಞಾನ ಪ್ರಯೋಗಗಳು' ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ಸಂಸ್ಥೆಯ ಭರತ್ ಕುಮಾರ್ ಮತ್ತು ಜಿ.ವಿ ನವೀನ ಕುಮಾರ್ ಉಪಸ್ಥಿತರಿರುವರು.

    ಇದೆ ದಿನ ಬೆಳಿಗ್ಗೆ ೧೦ ರಿಂದ ೧೧.೩೦ರವರೆಗೆ ಶಾಲಾ ಶಿಕ್ಷಕರಿಂದ `ಇತಿಹಾಸದಿಂದ ಪರಂಪರೆವರೆಗೆ ಬನ್ನಿ ನಮ್ಮ ಕರ್ನಾಟಕವನ್ನು ತಿಳಿಯೋಣ' ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ಸಂಸ್ಥೆಯ ಕೆ.ಎಚ್ ಶ್ರೀನಿಧಿ ಉಪಸ್ಥಿತರಿರುವರು. ೧೧.೪೫ ರಿಂದ ಮಧ್ಯಾಹ್ನ ೧ ಗಂಟೆವರೆಗೆ ಶಾಲಾ ಶಿಕ್ಷಕರಿಂದ `ವಿಜ್ಞಾನ ಪ್ರಯೋಗಳು' ಕಾರ್ಯಕ್ರಮ ನಡೆಯಲಿದ್ದು, ಶಿಕ್ಷಣ ಸಂಸ್ಥೆಯ ಎಸ್. ಮಂಜು ಉಪಸ್ಥಿತರಿರುವರು. ಮಧ್ಯಾಹ್ನ ೨ ರಿಂದ ಸಂಜೆ ೪ ಗಂಟೆವರೆಗೆ ಶಾಲಾ ಶಿಕ್ಷಕರಿಂದ  `ರಾವಣನ ಹತ್ತು ತಲೆಗಳು ಮತ್ತು ಹತ್ತು ಗುಣಗಳ ಪರಿಚಯ' ಕಾರ್ಯಕ್ರಮ ನಡೆಯಲಿದ್ದು, ಶಾಲಾ ಮಕ್ಕಳಿಂದ ಬಿಲ್ಲು, ಬಾಣ ತಯಾರಿಕೆ ಏರ್ಪಡಿಸಲಾಗಿದ್ದು, ಶಿಕ್ಷಣ ಸಂಸ್ಥೆಯ ಎಸ್.ಎನ್ ಭಾಗ್ಯಲಕ್ಷ್ಮಿ ಮತ್ತು ರಜನೀಕಾಂತ ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆಡಳಿತಾಧಿಕಾರಿ ವೇಣುಗೋಪಾಲ್ ಕೋರಿದ್ದಾರೆ.