ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶಾಸಕರ ಗೃಹ ಕಛೇರಿ ಆವರಣದಲ್ಲಿ ಪ್ರತಿಭಟನೆ




ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಶಿವಮೊಗ್ಗ ಜಿಲ್ಲಾ ಸಮಿತಿ, ತಾಲೂಕು ಘಟಕದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶುಕ್ರವಾರ ಭದ್ರಾವತಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಗೃಹ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. 

    ಭದ್ರಾವತಿ :  ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಶಿವಮೊಗ್ಗ ಜಿಲ್ಲಾ ಸಮಿತಿ, ತಾಲೂಕು ಘಟಕದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಶುಕ್ರವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ಗೃಹ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು. 

     ಮಧ್ಯಾಹ್ನ ಉಪಹಾರ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಗಳಿಗೆ ತಕ್ಷಣ ಗೌರವ ಧನ ಬಿಡುಗಡೆ ಮಾಡುವುದು. ಅಲ್ಲದೆ ಗೌರವ ಧನ ಹೆಚ್ಚಳ ಮಾಡುವುದು. ಕಾರ್ಮಿಕರಿಗೆ ಮಾರಕವಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಬಾರದು. ಪರಿಷ್ಕೃತ ಕನಿಷ್ಠ ವೇತನ ಕೂಡಲೇ ಜಾರಿ ಮಾಡಿ ಸ್ಟೀಂ ನೌಕರರನ್ನು ಕಾಯಂಗೊಳಿಸುವುದು. ಅಸಂಘಟಿತ ಸಾಮಾಜಿಕ ಭದ್ರತೆ ನೀಡಿ ಗುತ್ತಿಗೆ, ಹೊರಗುತ್ತಿಗೆ ಪದ್ಧತಿ ರದ್ದು ಮಾಡಿ, ಕಾಯಂಗೊಳಿಸಲು ಅಗತ್ಯ ಶಾಸನ ರೂಪಿಸುವುದು. ವಸತಿ ರಹಿತ ಕಾರ್ಮಿಕರಿಗೆ ವಸತಿ ಕಲ್ಪಿಸಿ ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. 



    ನಗರಸಭೆ ಹಿರಿಯ ಸದಸ್ಯ, ಶಾಸಕರ ಸಹೋದರ ಬಿ.ಕೆ ಮೋಹನ್ ಮನವಿ ಸ್ವೀಕರಿಸಿದರು. ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಕಾರ್ಮಿಕ ಮುಖಂಡ ಎಂ. ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ಶಿವಮೊಗ್ಗ ಜಿಲ್ಲಾ ಸಮಿತಿ, ತಾಲೂಕು ಘಟಕದ ಅಧ್ಯಕ್ಷೆ ಹನುಮಮ್ಮ ಪ್ರತಿಭಟನೆ ನೇತೃತ್ವದ ವಹಿಸಿದ್ದರು. ತಾಲೂಕಿನ ಬಿಸಿಯೂಟ ನೌಕರರು ಪಾಲ್ಗೊಂಡಿದ್ದರು.