ಪೊಲೀಸರಿಂದ ತಪ್ಪಿಸಿಕೊಳ್ಳಲು ಕೊಳದಲ್ಲಿ ಅಡಗಿ ಕುಳಿತ್ತಿದ್ದ ರೌಡಿಶೀಟರ್ !

ಸಿನಿಮೀಯ ರೀತಿ ಕಾರ್ಯಾಚರಣೆ ನಡೆಸಿ ಬಂಧಿಸಿದ ನ್ಯೂಟೌನ್ ಠಾಣೆ ಪೊಲೀಸರು


ಪೊಲೀಸರಿಂದ ತಪ್ಪಿಸಿಕೊಳ್ಳಲು ಸುಮಾರು ಅರ್ಧ ಗಂಟೆ ಕಾಲ ಕೊಳದಲ್ಲಿ ಗಿಡಗಳ ಮಧ್ಯೆ ಅಡಗಿ ಕುಳಿತ್ತಿದ್ದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಬಂಧಿಸಿರುವ ಘಟನೆ  ಭದ್ರಾವತಿಯಲ್ಲಿ ನಡೆದಿದೆ. 
    ಭದ್ರಾವತಿ: ಪೊಲೀಸರಿಂದ ತಪ್ಪಿಸಿಕೊಳ್ಳಲು ಸುಮಾರು ಅರ್ಧ ಗಂಟೆ ಕಾಲ ಕೊಳದಲ್ಲಿ ಗಿಡಗಳ ಮಧ್ಯೆ ಅಡಗಿ ಕುಳಿತ್ತಿದ್ದ ಆರೋಪಿಯನ್ನು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಬಂಧಿಸಿರುವ ಘಟನೆ ನಡೆದಿದೆ. 
    ಬಂಧನದ ಆದೇಶದೊಂದಿಗೆ ನಗರಸಭೆ ವ್ಯಾಪ್ತಿಯ ಭಂಡಾರಹಳ್ಳಿಯಲ್ಲಿ ರೌಡಿಶೀಟರ್ ದಿಲೀಪನನ್ನು ಪೊಲೀಸರು ಬಂಧಿಸಲು ತೆರಳಿದ್ದಾಗ ಈ ಘಟನೆ ನಡೆದಿದೆ. ಕೊಲೆ, ಕಳ್ಳತನ ಸೇರಿದಂತೆ ೧೬ ಪ್ರಕರಣಗಳಲ್ಲಿ ಆರೋಪಿಯಾಗಿರುವ  ರೌಡಿಶೀಟರ್ ದಿಲೀಪನ ಬಂಧನಕ್ಕೆ ನ್ಯಾಯಾಲಯ ೩ ಬಾರಿ ಬಂಧನ ಆದೇಶ ಜಾರಿ ಮಾಡಿತ್ತು. ಆದರೂ ಈತ ಪೊಲೀಸರ ಕಣ್ತಪ್ಪಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದ. ಬುಧವಾರ ಖಚಿತ ಮಾಹಿತಿ ಮೇರೆಗೆ ನ್ಯೂಟೌನ್ ಠಾಣೆ ಪೊಲೀಸರು ಬಂಧನಕ್ಕೆ ತೆರಳಿದ್ದಾರೆ. ಪೊಲೀಸರು ಬರುವ ಬಗ್ಗೆ ಮಾಹಿತಿ ತಿಳಿದು ಮನೆಯಿಂದ ದಿಲೀಪ್ ಪರಾರಿಯಾಗಿದ್ದಾನೆ. 


    ಪೊಲೀಸರು ಸುತ್ತಮುತ್ತ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಕೊನೆಗೆ ಭಂಡಾರಹಳ್ಳಿ ಕೊಳ ಬಳಿ ದಿಲೀಪ್ ಹೋಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದಾಗ ಅಲ್ಲಿ ಹೋಗಿ ನೋಡಿದಾಗ ಆತ ಕಾಣಿಸಿಲ್ಲ.  ಅರ್ಧ ಗಂಟೆಗಳ ಕಾಲ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಕೊಳಕ್ಕೆ ಇಳಿದು, ಹೋಗಿರುವ ಜಾಡು ಪತ್ತೆ ಮಾಡಿದ ಪೊಲೀಸರು ಕೊಳಕ್ಕೆ ಇಳಿದು ಪರಿಶೀಲಿಸಿದಾಗ ಕೊಳದಲ್ಲಿ ನೀರಿನಲ್ಲಿದ್ದ ಗಿಡಗಳು ಬದಲಾಗಿದ್ದನ್ನು ಗಮನಿಸಿದ್ದಾರೆ. ಕೂಡಲೇ ಅಲ್ಲಿ ನೋಡಿದಾಗ ಗಿಡಗಳ ನಡುವೆ ಅವಿತು ಕುಳಿತಿರುವುದು ಪತ್ತೆಯಾಗಿದೆ. ಬಳಿಕ  ಪೊಲೀಸರು ಆತನನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪವಿಭಾಗದ ಉಪಾಧೀಕ್ಷ ಪ್ರಕಾಶ್ ರಾಥೋಡ್‌ರವರ ಮಾರ್ಗದರ್ಶನದಲ್ಲಿ ಠಾಣಾ ಉಪ ನಿರೀಕ್ಷಕ ರಮೇಶ್ ಹಾಗೂ ಸಿಬ್ಬಂದಿ ಪ್ರಸನ್ನ ಅವರು ಭಾಗಿಯಾಗಿದ್ದರು.