ವಿವಿಧೆಡೆ ಸಂಭ್ರಮದ ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಣ್ಮನ ಸೆಳೆದ ಪುಟಾಣಿ ಮಕ್ಕಳು
ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಮೆಸ್ ಸರ್ಕಲ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ತಾಲೂಕು ಗೊಲ್ಲ ಯಾದವ ಸಂಘದಿಂದ ಆಚರಿಸಲಾಯಿತು.
ಭದ್ರಾವತಿ: ನಗರದ ವಿವಿಧೆಡೆ ತಾಲೂಕು ಗೊಲ್ಲ ಯಾದವ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಶುಕ್ರವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮದಿಂದ ಆಚರಿಸಲಾಯಿತು.
ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಮೆಸ್ ಸರ್ಕಲ್ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜನ್ಮಾಷ್ಟಮಿ ತಾಲೂಕು ಗೊಲ್ಲ ಯಾದವ ಸಂಘದಿಂದ ಆಚರಿಸಲಾಯಿತು. ಶ್ರೀ ಕೃಷ್ಣನಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು. ದೇವಸ್ಥಾನದ ಆವರಣದಲ್ಲಿ ಶ್ರೀ ಕೃಷ್ಣನಿಗೆ ತೊಟ್ಟಿಲು ಸೇವೆ ಕೈಗೊಳ್ಳಲಾಗಿತ್ತು. ತೀರ್ಥಪ್ರಸಾದ ವಿನಿಯೋಗ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ನೆರವೇರಿದವು.
ಅರ್ಚಕರಾದ ರಮೇಶ್ ಭಟ್ ಅರಳಿಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನೆರವೇರಿದವು. ತಾಲೂಕು ಗೊಲ್ಲ ಯಾದವ ಸಂಘದ ಅಧ್ಯಕ್ಷರಾದ ವೆಂಕಟೇಶಪ್ಪ ಹಾಗು ಪದಾಧಿಕಾರಿಗಳು, ಸೇವಾಕರ್ತರು, ನಗರದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ಶ್ರೀ ಕೃಷ್ಣನ ದರ್ಶನ ಪಡೆದರು. ವಿಶೇಷವಾಗಿ ಭಕ್ತರಿಗೆ ಲಾಡು ವಿತರಿಸಲಾಯಿತು.
ಭದ್ರಾವತಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಹಸೀಲ್ದಾರ್ ಸಭಾಂಗಣದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜಯಂತಿ ಆಚರಿಸಲಾಯಿತು.
ತಾಲೂಕು ಕಛೇರಿಯಲ್ಲಿ ಶ್ರೀ ಕೃಷ್ಣ ಜಯಂತಿ :
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಹಸೀಲ್ದಾರ್ ಸಭಾಂಗಣದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಶ್ರೀ ಕೃಷ್ಣ ಜಯಂತಿ ಆಚರಿಸಲಾಯಿತು.
ತಹಸೀಲ್ದಾರ್ ಪ್ರದೀಪ್ ದೇವಗಿರಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭಿಸಲಾಯಿತು. ತಾಲೂಕು ಯಾದವ ಸಮಾಜದ ಪ್ರಮುಖರಾದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಮಾತನಾಡಿದರು.
ತಹಸೀಲ್ದಾರ್ ಗ್ರೇಡ್-೨ ಸುರೇಶ್, ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್, ತಾಲೂಕು ಯಾದವ ಸಮಾಜದ ಪದಾಧಿಕಾರಿಗಳು, ಮುಖಂಡರು, ತಾಲೂಕು ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಥರ್ವ ಕಿಡ್ಸ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ:
ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ೩ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ೨ ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಶುಕ್ರವಾರ ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು.
ಶ್ರೀ ಕೃಷ್ಣ-ರಾಧೆ ವೇಷದೊಂದಿಗೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಮಕ್ಕಳು ತಮ್ಮದೇ ಆದ ಹಾವ-ಭಾವ ಭಂಗಿಗಳಿಂದ, ಮಾತುಗಳಿಂದ ಎಲ್ಲರನ್ನು ರಂಜಿಸುವ ಮೂಲಕ ಕಣ್ಮನ ಸೆಳೆದರು. ಕಾರ್ಯಕ್ರಮಕ್ಕೆ ಪೂರಕವಾಗಿ ವೈಭವಯುತವಾದ ವೇದಿಕೆಯನ್ನು ಸಹ ಸಿದ್ದಪಡಿಸಲಾಗಿತ್ತು.
ಭದ್ರಾವತಿ ಹುತ್ತಾ ಕಾಲೋನಿ ಅಥರ್ವ ಕಿಡ್ಸ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ೩ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ೨ ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಶುಕ್ರವಾರ ಮಕ್ಕಳು ಶ್ರೀ ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದರು.
ಈ ನಡುವೆ ಶಾಲೆ ಒಳ ಭಾಗದಲ್ಲಿ ಶ್ರೀ ಕೃಷ್ಣ-ರಾಧೆ ಇಬ್ಬರೂ ನಿಧಿವನದಲ್ಲಿ ವಿಹಾರಗೊಂಡಿರುವಂತೆ ಅದ್ಭುತವಾಗಿ ಅಲಂಕರಿಸಲಾಗಿತ್ತು. ಮಕ್ಕಳು, ಪೋಷಕರು ಕಣ್ತುಂಬಿಕೊಂಡರು. ಮತ್ತೊಂದೆಡೆ ಶಾಲಾ ಆವರಣದಲ್ಲಿ ಅಲಂಕೃತಗೊಂಡ ಜೋಕಾಲಿಯಲ್ಲಿ ಮಕ್ಕಳು ಕುಳಿತು ಆಟವಾಡಿ ಇನ್ನೊಂದೆಡೆ ಬಣ್ಣದ ಮಡಿಕೆ ಒಡೆದು ಸಂಭ್ರಮಿಸಿದರು. ಶ್ರೀಕೃಷ್ಣ-ರಾಧೆ ವೇಷ ಧರಿಸಿದ್ದ ತಮ್ಮ ಮಕ್ಕಳ ಹಾವ-ಭಾವ ಭಂಗಿಗಳನ್ನು ಪೋಷಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಆನಂದಿಸಿದರು. ಶ್ರೀ ಕೃಷ್ಣ-ರಾಧೆ ವೇಷ ಧರಿಸಿದ್ದ ಎಲ್ಲಾ ಮಕ್ಕಳಿಗೂ ಬಹುಮಾನಗಳನ್ನು ವಿತರಿಸುವ ಮೂಲಕ ಪ್ರೋತ್ಸಾಹಿಸಲಾಯಿತು.

.jpeg)
.jpg)