ಬಾಲ್ಯ ವಿವಾಹದ ವಿರುದ್ಧ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ನೇತೃತ್ವದ ಅಭಿಯಾನಕ್ಕೆ ವಿಶ್ವಸಂಸ್ಥೆಯ ಮಾನ್ಯತೆ

ನ.೨೭ರಂದು ಅಂತರರಾಷ್ಟ್ರೀಯ ದಿನ ಘೋಷಣೆ ಆಶ್ರಿತ ಸಂಸ್ಥೆ ಸ್ವಾಗತ : ಎಸ್. ಹನುಮಂತಪ್ಪ 


ಭದ್ರಾವತಿ ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಶ್ರಿತ.ಸಂಸ್ಥೆಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ  ಸಂಸ್ಥೆಯ ಜಿಲ್ಲಾ ಸಂಯೋಜಕ ಎಸ್. ಹನುಮಂತಪ್ಪ ಮಾತನಾಡಿದರು.  
    ಭದ್ರಾವತಿ:  ``ಬಾಲ್ಯ ವಿವಾಹ, ಬಾಲ್ಯಾವಸ್ಥೆಯಲ್ಲಿನ ಹಾಗೂ ಬಲವಂತದ ವಿವಾಹಗಳ ನಿರ್ಮೂಲನೆಗಾಗಿ ನ. ೨೭ರಂದು ಅಂತರರಾಷ್ಟ್ರೀಯ ದಿನ'' ಎಂದು ಘೋಷಿಸುವ ವಿಶ್ವಸಂಸ್ಥೆಯ ಐತಿಹಾಸಿಕ ನಿರ್ಧಾರವನ್ನು ಜಿಲ್ಲೆಯಲ್ಲಿ ಬಾಲ್ಯ ವಿವಾಹದ ವಿರುದ್ಧ ತಳಮಟ್ಟದಲ್ಲಿ ಅಭಿಯಾನವನ್ನು ಮುನ್ನಡೆಸುತ್ತಿರುವ ಆಶ್ರಿತ.ಸಂಸ್ಥೆ  ಸ್ವಾಗತಿಸುತ್ತದೆ ಎಂದು ಸಂಸ್ಥೆಯ ಜಿಲ್ಲಾ ಸಂಯೋಜಕ ಎಸ್. ಹನುಮಂತಪ್ಪ ಹೇಳಿದರು. 
    ಅವರು ನಗರದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 
ಈ ಘೋಷಣೆಯು ದೇಶಾದ್ಯಂತ ಬಾಲ್ಯ ವಿವಾಹವನ್ನು ತಡೆಗಟ್ಟಲು ಸರ್ಕಾರಗಳು ಮತ್ತು ಆಡಳಿತ ವ್ಯವಸ್ಥೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಭಾರತದ ಅತಿದೊಡ್ಡ ಎನ್‌ಜಿಓ ಜಾಲವಾದ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ (ಜೆಆರ್‌ಸಿ) ನಡೆಸಿದ ಅಸಾಧಾರಣ ಪ್ರಯತ್ನಗಳಿಗೆ ದೊರೆತ ಜಾಗತಿಕ ಮಾನ್ಯತೆಯಾಗಿದೆ. ಆಶ್ರಿತ ಸಂಸ್ಥೆ ಹಲವು ವರ್ಷಗಳಿಂದ ಬಾಲ್ಯ ವಿವಾಹದ ವಿರುದ್ಧ ಸಮರ್ಪಿತ ಅಂತರರಾಷ್ಟ್ರೀಯ ದಿನವನ್ನು ಘೋಷಿಸಬೇಕೆಂದು ನಿರಂತರವಾಗಿ ಪ್ರತಿಪಾದಿಸುತ್ತಿರುವ ಜೆಆರ್‌ಸಿಯ ಪಾಲುದಾರ ಸಂಸ್ಥೆಯಾಗಿದೆ ಎಂದರು. 
    ಭಾರತದಿಂದ ಮೊಳಗಿದ ಧ್ವನಿ ಇಂದು ಜಾಗತಿಕ ಸಂಕಲ್ಪವಾಗಿ ರೂಪುಗೊಂಡಿದೆ. ನಮ್ಮ ಪ್ರಯತ್ನಗಳಿಗೆ ಜಾಗತಿಕ ಮಾನ್ಯತೆ ದೊರೆತಿರುವುದು ಅಪಾರ ಹೆಮ್ಮೆಯ ಕ್ಷಣವಾಗಿದೆ. ಬಾಲ್ಯ ವಿವಾಹವನ್ನು ಕೊನೆಗೊಳಿಸಲು ಮೀಸಲಾದ ಜಾಗತಿಕ ದಿನವಾಗಿ ನ. ೨೭ನ್ನು ವಿಶ್ವಸಂಸ್ಥೆಯು ಆಯ್ಕೆ ಮಾಡಿರುವುದು ಭಾರತಕ್ಕೂ ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.
    ೨೦೨೪ರ ಇದೇ ದಿನದಂದು ಭಾರತ ಸರ್ಕಾರವು ಜೆಆರ್‌ಸಿ ಪಾಲುದಾರ ಸಂಸ್ಥೆಗಳ ಸಹಭಾಗಿತ್ವದಲ್ಲಿ `ಬಾಲ್ಯ ವಿವಾಹ ಮುಕ್ತ ಭಾರತ' ಅಭಿಯಾನವನ್ನು ಆರಂಭಿಸಿತ್ತು. ಆದರೆ, ಇದು ಸಂಭ್ರಮಿಸಿ ನಮ್ಮ ಕಾರ್ಯವನ್ನು ನಿಲ್ಲಿಸುವ ಸಮಯವಲ್ಲ. ಈ ಜಾಗತಿಕ ಬದ್ಧತೆಯನ್ನು ನೆಲಮಟ್ಟದಲ್ಲಿ ಪರಿಣಾಮಕಾರಿ ಕಾರ್ಯರೂಪಕ್ಕೆ ತರುವುದು ಈಗ ನಮ್ಮ ಮುಂದಿರುವ ನಿಜವಾದ ಸವಾಲಾಗಿದೆ ಎಂದು ಹೇಳಿದರು.
    ನಮ್ಮ ಜಿಲ್ಲೆಯ ಯಾವುದೇ ಒಂದು ಗ್ರಾಮದಲ್ಲಾದರೂ ಒಬ್ಬ ಮಗು ಬಾಲ್ಯ ವಿವಾಹದ ಬೆದರಿಕೆಯ ಅಡಿಯಲ್ಲಿ ಬದುಕಬೇಕಾದ ಪರಿಸ್ಥಿತಿ ಮುಂದುವರಿದಿರುವವರೆಗೆ ನಮ್ಮ ಹೋರಾಟ ಸಂಪೂರ್ಣವಾಗುವುದಿಲ್ಲ. ಕಾನೂನು ರೂಪಿಸುವುದರಿಂದ ಮಾತ್ರ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂಬುದು ನಮಗೆ ತಿಳಿದಿದೆ. ಆದ್ದರಿಂದಲೇ ನಾವು ಶಾಲೆಗಳು, ಗ್ರಾಮ ಪಂಚಾಯಿತಿಗಳು ಮತ್ತು ಗ್ರಾಮಗಳಲ್ಲಿ ದೊಡ್ಡ ಪ್ರಮಾಣದ ಜಾಗೃತಿ ಅಭಿಯಾನಗಳನ್ನು ಕೈಗೊಂಡಿದ್ದೇವೆ. ಬಾಲ್ಯ ವಿವಾಹದ ವಿರುದ್ಧ ಜನರು ಪ್ರತಿಜ್ಞೆ ಕೈಗೊಳ್ಳುವಂತೆ ಪ್ರೋತ್ಸಾಹಿಸಿದ್ದೇವೆ. ಬಾಲ್ಯ ವಿವಾಹದ ಅಪಾಯದಲ್ಲಿರುವ ಆರ್ಥಿಕವಾಗಿ ದುರ್ಬಲ ಕುಟುಂಬಗಳನ್ನು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳೊಂದಿಗೆ ಸಂಪರ್ಕಿಸಿದ್ದೇವೆ. ಅಲ್ಲದೆ, ಶಾಲೆಯಿಂದ ಹೊರಗುಳಿದಿದ್ದ ಮಕ್ಕಳನ್ನು ಮತ್ತೆ ಶಾಲೆಗೆ ದಾಖಲಿಸಿಕೊಳ್ಳಲು ಅಗತ್ಯ ನೆರವು ಮತ್ತು ಮಾರ್ಗದರ್ಶನವನ್ನು ಒದಗಿಸಿದ್ದೇವೆ ಎಂದರು. 
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಜಿ. ಸುರೇಂದ್ರ ನಾಯ್ಕರವರು ಮಾತನಾಡಿ, ಆಶ್ರಿತ ಸಂಸ್ಥೆ ಮಕ್ಕಳ ಹಕ್ಕುಗಳ ಸಂರಕ್ಷಣೆಗೆ ಮುಂದಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಂಸ್ಥೆಯ ಈ ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು. 
    ಕಾಲೇಜಿನ ಉಪನ್ಯಾಸಕರಾದ ಎಂ.ಆರ್ ತಿಪ್ಪೇಸ್ವಾಮಿ, ಬಿ.ಟಿ ಗಿರಿಧರಮೂರ್ತಿ, ಡಿ.ಎನ್ ಶೀಲಾ, ಪರಶುರಾಮ್ ಮತ್ತು ಆಶ್ರಿತ ಸಂಸ್ಥೆಯ ಸಾಮಾಜಿಕ ಸಮುದಾಯ ಕಾರ್ಯಕರ್ತ ಸಂಗಮೇಶ, ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.