ಹಲವು ನಿರ್ಣಯಗಳೊಂದಿಗೆ ನಗರಸಭೆ ಸದಸ್ಯರ ಕೊನೆಯ ಸಾಮಾನ್ಯ ಸಭೆ ಯಶಸ್ವಿ

ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್ ನಿಷೇಧ, ಪಾದಚಾರಿ ಪಥ ಸಂಚಾರಕ್ಕೆ ಮುಕ್ತಗೊಳಿಸಿ


ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾಬದರಿನಾರಾಯಣ, ಪೌರಾಯುಕ್ತ ಕೆ.ಎನ್.ಹೇಮಂತ್ ಉಪಸ್ಥಿತರಿದ್ದರು.

    ಭದ್ರಾವತಿ; ಪ್ರಸ್ತುತ ಇಲ್ಲಿನ ನಗರಸಭೆ ಸದಸ್ಯರ ಅವಧಿ ಮುಕ್ತಾಯಗೊಳ್ಳಲು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ನಡುವೆ ಸದಸ್ಯರ ಕೊನೆಯ ಸಾಮಾನ್ಯ ಸಭೆ ಹಲವು ನಿರ್ಣಯಗಳೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್‌ಗಳಲ್ಲಿ ವಿದ್ಯುತ್ ಕಂಬಗಳಿಗೆ ಹಾಗು ರಸ್ತೆ ವಿಭಜಕಗಳ ಮಧ್ಯೆ ಅಳವಡಿಸಲಾಗಿರುವ ಹೈ ಮಾಸ್ಕ್ ಕಂಬಗಳಿಗೆ ಯಾವುದೇ ರೀತಿಯ ಫ್ಲೆಕ್ಸ್, ಬಂಟಿಂಗ್ಸ್ ಮತ್ತು ಬ್ಯಾನರ್ ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಬಹುತೇಕ ಸದಸ್ಯರು ಆಗ್ರಹಿಸಿದರು.

    ಈ ವಿಷಯಕ್ಕೆ ಸಂಬಂಧಿಸಿದಂತೆ ಸದಸ್ಯರಾದ ಚನ್ನಪ್ಪ, ಬಿ.ಟಿ ನಾಗರಾಜ್, ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಮಾತನಾಡಿ, ಇತ್ತೀಚೆಗೆ ನಗರದ ಡಾ. ರಾಜಕುಮಾರ್ ರಸ್ತೆ(ಬಿ.ಎಚ್ ರಸ್ತೆ), ಮಹಾತ್ಮಗಾಂಧಿ ರಸ್ತೆ (ಟಿ.ಕೆ ರಸ್ತೆ) ಸೇರಿದಂತೆ ಹಲವೆಡೆ ನೂತನವಾಗಿ ರಸ್ತೆ ವಿಭಜಕಗಳನ್ನು ನಿರ್ಮಿಸಿ ನಗರದ ಸೌಂದರ್ಯ ಹೆಚ್ಚಿಸಲು ವಿದ್ಯುತ್ ಕಂಬಗಳಿಗೆ ಹೈಮಾಸ್ಕ್ ದೀಪಗಳನ್ನು ಅಳವಡಿಸಲಾಗಿದೆ. ಆ ಕಂಬಗಳಿಗೆ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಿ ಊರಿನ ಪರಿಸರ ಹಾಳು ಮಾಡಲಾಗುತ್ತಿದೆ. ಇನ್ನು ಮುಂದೆ ಅದಕ್ಕೆ ಅವಕಾಶ ಕೊಡಬೇಡಿ, ಹಿಂದೆ ಈ ನಿಯಮ ಜಾರಿಯಲ್ಲಿದ್ದರೂ ಇತ್ತೀಚೆಗೆ ಅಧಿಕಾರಿಗಳಿಂದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿಲ್ಲ. ಯಾರಾದರೂ ಪೋನ್ ಮಾಡಿ ಅವಕಾಶ ಕೊಡಿ ಎಂದರೆ ಆಯುಕ್ತರು "ಆಯಿತು" ಎಂದು ಸುಮ್ಮನಾಗುತ್ತಾರೆ. ಅಧಿಕಾರಿಗಳಿಗೆ ಮಾತಿನಲ್ಲಿ ದರ್ಪವಿರಬೇಕು. ಸೂಕ್ತ ಕಾನೂನು ಪಾಲಿಸಬೇಕು ಎಂದರು.

    ಪೌರಾಯುಕ್ತ ಕೆ.ಎನ್ ಹೇಮಂತ್ ಮಾತನಾಡಿ, ಪ್ಲೆಕ್ಸ್, ಬ್ಯಾನರ್ ಅಳವಡಿಕೆ ನಿಲ್ಲಿಸಲು ಇದುವರೆಗೂ ಯಾವುದೇ ಜಿಲ್ಲೆ ಅಥವಾ ತಾಲೂಕುಗಳಲ್ಲಿ ಸಾಧ್ಯವಾಗಿಲ್ಲ ಯಾವುದಾದರೂ ನಿಗದಿತ ಜಾಗ ಗುರುತು ಮಾಡಿ, ನಗರಸಭೆ ಅನುಮತಿ ಪಡೆದು ಸೀಮಿತ ಅವಧಿಗೆ ಹಾಕಿಕೊಳ್ಳುವ ತೀರ್ಮಾನವನ್ನು ಸದಸ್ಯರುಗಳು ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು. ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿ ನಮ್ಮ ಊರಿಗೆ ಪ್ಲೆಕ್ಸ್‌ಗಳೇ ಬೇಡ ಎಂದರು.

    ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಅಂಗಡಿ-ಮುಂಗಟ್ಟುಗಳ ಮಾಲೀಕರು ಪಾದಚಾರಿ ಪಥದ(ಪುಟ್‌ಪಾತ್) ಮೇಲೆಯೇ ತಮ್ಮ ಅಂಗಡಿಗಳ ಸಾಮಗ್ರಿಗಳನ್ನು ಇಟ್ಟುಕೊಂಡು ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನಗತ್ಯ ತೊಂದರೆ ನೀಡುತ್ತಿದ್ದಾರೆ. ಈ ಕುರಿತು ಹಲವಾರು ಬಾರಿ ಆಯುಕ್ತರ ಗಮನಕ್ಕೆ ತಂದರೂ, ಸಾಮಾನ್ಯ ಸಭೆಯಲ್ಲಿ ಸಹ ಚರ್ಚಿಸಲಾಗಿದ್ದರೂ, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಪುಟ್‌ಪಾತ್ ಅತಿಕ್ರಮಣ ಪ್ರವೇಶವನ್ನು ತಡೆಯಬೇಕೆಂದು ತಿಳಿಸಿದ್ದರೂ ಯಾವುದೆ ಕ್ರಮವನ್ನು ಕೈಗೊಂಡಿಲ್ಲ ತಕ್ಷಣ ಅದರ ಬಗ್ಗೆ ಗಮನಹರಿಸಬೇಕು. ಎಲ್ಲಾ ವಾರ್ಡ್‌ಗಳ ಜನತೆಯ ಪರವಾಗಿಯೂ ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಸದಸ್ಯ ಚನ್ನಪ್ಪ ಹೇಳಿದರು.

    ಸದಸ್ಯರ ಪ್ರೆಶ್ನೆಗೆ ಉತ್ತರಿಸಿದ ಆಯುಕ್ತರು, ಪಾದಾಚಾರಿ ಮಾರ್ಗಗಳಲ್ಲಿ ಅಂಗಡಿಗಳ ಮಾರಾಟದ ವಸ್ತುಗಳನ್ನು ಇಡುವಂತಿಲ್ಲ ಎಂದು ಈಗಾಗಲೇ ಅಂಗಡಿ ಮಾಲೀಕರುಗಳ ಸಭೆ ಕರೆದು ತಿಳಿಸಲಾಗಿದೆ. ಆಟೋರಿಕ್ಷಾಗಳಲ್ಲಿ ಪ್ರಚಾರ ನಡೆಸಲಾಗಿದ್ದು, ಅಲ್ಲದೆ ಕರಪತ್ರ ಹಂಚಲಾಗಿದೆ ಎಂದರು.

    ಇದಕ್ಕೆ ಸಿಟ್ಟಾದ ಸದಸ್ಯ ಚನ್ನಪ್ಪ, ಕರಪತ್ರ ಹಂಚುವುದರಿಂದ, ಆಟೋ ಪ್ರಚಾರ ನಡೆಸುವುದರಿಂದ ವ್ಯಾಪಾರಸ್ಥರು ಮಾತು ಕೇಳಲ್ಲ. ಆ ರೀತಿಯ ಪ್ರಯತ್ನ ಸೂಕ್ತವೂ ಅಲ್ಲ . ಅಧಿಕಾರಿಗಳಾದ ನೀವುಗಳು ಸ್ಥಳದಲ್ಲಿ ನಿಂತು ಪಾದಾಚಾರಿ ಮಾರ್ಗದಲ್ಲಿರುವ ವಸ್ತುಗಳನ್ನು ತೆರವುಗೊಳಿಸಬೇಕು. ಸಚಿವ ಕೃಷ್ಣ ಬೈರೇಗೌಡರು ಕರಪತ್ರ ಹಂಚಿದ್ದರೆ ಹಂಚುತ್ತಲೆ ಕೂರಬೇಕಿತ್ತು. ಖಡಕ್ ಆಗಿ ನಿಂತು ಕೆಲಸ ಮಾಡಿದ್ದಕ್ಕೆ ಬೆಂಗಳೂರಿನಲ್ಲಿ ಇಂದು ಪಾದಾಚಾರಿಗಳು ನಿರ್ಭೀತಿಯಿಂದ ನಡೆದಾಡುವಂತಾಗಿದೆ ಎಂದರು.

    ನಗರಸಭೆ ವ್ಯಾಪ್ತಿಯಲ್ಲಿ ಕೊಳಚೆ ಮಂಡಳಿಗೆ ಸೇರಿದ ಬಡಾವಣೆಗಳಾದ ಗುಂಡೂರಾವ್‌ಶೆಡ್, ಜಿಂಕ್‌ಲೈನ್ ಸೇರಿದಂತೆ ಎಂಪಿಎಂ, ವಿಐಎಸ್‌ಎಲ್ ಕಾರ್ಖಾನೆ ವ್ಯಾಪ್ತಿಗೆ ಬರುವ ಕೆಲವು ಪ್ರದೇಶಗಳ ನಿವಾಸಿಗಳಿಗೆ ಇದುವರೆಗೂ ಹಕ್ಕುಪತ್ರ ನೀಡಿಲ್ಲ. ಅರ್ಹ ನಿವಾಸಿಗಳ ಪಟ್ಟಿ ಸಹ ನಗರಸಭೆಯಿಂದ ಕಳುಹಿಸಿಕೊಡಲಾಗಿತ್ತು. ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ಬಿ.ಟಿ ನಾಗರಾಜ್ ಕೊಳಚೆ ಮಂಡಳಿ ಅಧಿಕಾರಿಗಳನ್ನು ಪ್ರಶ್ನಿಸಿದರು.

    ಅಧಿಕಾರಿಗಳು ಉತ್ತರಿಸಿ, ಈಗ ಕೇವಲ ಹಕ್ಕುಪತ್ರ ಮಾತ್ರ ಕೊಡುವ ಆಗಿಲ್ಲ. ಜೊತೆಯಾಗಿ ಕ್ರಯಪತ್ರವೂ ಮಾಡಿಕೊಡಬೇಕಾಗಿದೆ. ಒಂದು ಪಡಿತರ ಕಾರ್ಡಿಗೆ ಒಂದು ಹಕ್ಕುಪತ್ರ ಮಾತ್ರ ನೀಡಬಹುದಾಗಿದ್ದು, ಇಬ್ಬರಿಗೆ ಕೊಡಲು ಸಾಧ್ಯವಿಲ್ಲ. ಕೆಲವರು ಪಡಿತರ ಕಾರ್ಡ್ ಹೊಂದಿಲ್ಲದ ಕಾರಣ ಕೊಡಲು ಬರುತ್ತಿಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಹಕ್ಕುಪತ್ರ ನೀಡಲಾಗುವುದು ಎಂದರು.

    ಅನಗತ್ಯವಾಗಿ ಟ್ರಾಕ್ಟರ್, ಟಿಪ್ಪರ್ ಖರೀಧಿಸುವುದು ಬಿಟ್ಟು ಅವುಗಳಿಗೆ ಮಾಡುವ ಖರ್ಚನ್ನು ರಸ್ತೆಯಲ್ಲಿ ದ್ದಿರುವ ಗುಂಡಿಗಳನ್ನು ಮುಚ್ಚಲು ಬಳಸಿಕೊಳ್ಳಿ, ಸಾರ್ವಜನಿಕರ ತೆರಿಗೆ ಹಣವನ್ನು ವ್ಯರ್ಥ ಪೋಲು ಮಾಡಬೇಡಿ, ಜೇಡಿಕಟ್ಟೆ ಕವಲಗುಂದಿ ಗ್ರಾಮಗಳಲ್ಲಿರುವ ಜಮೀನುಗಳಲ್ಲಿ ಅಕ್ರಮವಾಗಿ ಲೇಔಟ್ ಮಾಡಿ ಅವುಗಳಿಗೆ ಖಾತೆ ಮಾಡಿ ಸೈಟುಗಳನ್ನು ಹಂಚಲಾಗುತ್ತಿದೆ. ಅವುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.

    ೧೫ನೇ ಹಣಕಾಸು ಆಯೋಗದ ಎಂಪಿಸಿ ಅನುದಾನದಡಿ ೨೫ ಲಕ್ಷ ಮೇಲ್ಪಟ್ಟ ವಿವಿಧ ಕಾಮಗಾರಿಗಳು, ೧೫ ಕೋ. ವಿಶೇಷ ಅನುದಾನದಡಿ ರಸ್ತೆ, ಚರಂಡಿ, ಕಾಮಗಾರಿಗಳು ಸೇರಿದಂತೆ ೧೩ ವಿಷಯಗಳಿಗೆ ಸಭೆ ಅನುಮೋದಿಸಿತು.

ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾಬದರಿನಾರಾಯಣ ಉಪಸ್ಥಿತರಿದ್ದರು.